ಅಹಂ ತೋರಿಸಿದ ಎಂಟಿಬಿ ನಾಗರಾಜ್ ಸೋತಿದ್ದಾರೆ: ಬಿಜೆಪಿ ಸಂಸದ ಬಚ್ಚೇಗೌಡ

Update: 2019-12-09 12:42 GMT

ಬೆಂಗಳೂರು, ಡಿ.9: ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೇಗೌಡ ಸ್ವಯಂ ವರ್ಚಸ್ಸಿನಿಂದ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿಗೆ ನಾನು ಸಹಕರಿಸಿದೆ ಎಂಬ ಅನರ್ಹ ಶಾಸಕ ಎಂಟಿಬಿ ಹೇಳಿಕೆ ಸಲ್ಲ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಪ್ರತಿಕ್ರಿಯಿಸಿದ್ದಾರೆ.

ಶರತ್ ಬಚ್ಚೇಗೌಡ ಹೊಸಕೋಟೆ ಕಣ ಪ್ರವೇಶಿಸಿದ ದಿನದಿಂದ ಎಂಟಿಬಿ ನಾಗರಾಜ್ ಬಿಜೆಪಿ ರಾಜ್ಯ ನಾಯಕರಿಗೆ ಕರೆ ಮಾಡಿ ಶರತ್ ಬಚ್ಚೇಗೌಡ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಒತ್ತಡ ಹೇರಿದ್ದರು. ಆದರೆ, ಯಾರ ಒತ್ತಡಕ್ಕೂ ಮಣಿಯದ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಶರತ್ ಬಚ್ಚೇಗೌಡ ವಿಜಯದ ಬಳಿಕ ಪ್ರತಿಕ್ರಿಯಿಸಿರುವ ಸಂಸದ, ಬಿಜೆಪಿಯಿಂದ ಶರತ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ, ಆತ ಸ್ಥಳೀಯ ನಾಯಕರ ಒತ್ತಾಯದ ಮೇರೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ಧಾನೆ. ಇದು ಮತದಾರರ ತೀರ್ಪು ಇದನ್ನು ಸ್ವಾಗತಿಸಬೇಕು ಎಂದು ಹೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಶರತ್ ನನ್ನ ಮಗ ಎಂದು ನಾನು ಎಲ್ಲಿಯೂ ಪ್ರಚಾರ ಮಾಡಿಲ್ಲ. ಆರೋಗ್ಯ ಹದಗೆಟ್ಟಿದ್ದ ಕಾರಣ ಕಳೆದ 40 ದಿನಗಳಿಂದ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಇದೇ ಕಾರಣಕ್ಕೆ ಚಿಕ್ಕಬಳ್ಳಾಪುರ ಉಸ್ತುವಾರಿ ಹೊತ್ತಿದ್ದರೂ ನಾನು ಹೋಗಲು ಸಾಧ್ಯವಾಗಲಿಲ್ಲ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದು ಹೈಕಮಾಂಡ್ ಆದೇಶ. ಅದನ್ನ ಯಾರು ಪ್ರಶ್ನೆ ಮಾಡುವಂತಿಲ್ಲ. ನಾನು ಪಕ್ಷದ ಈ ನಿರ್ಧಾರವನ್ನು ಪ್ರಶ್ನೆ ಮಾಡಿರಲಿಲ್ಲ. ಆದರೆ, ಎಂಟಿಬಿ ಈಗ ನನ್ನ ವಿರುದ್ಧವೇ ಬಿಎಸ್‌ವೈಗೆ ದೂರು ನೀಡಿದ್ದಾರೆ ಎಂದು ತಿಳಿಸಿದರು.

ನಾನು ಚುನಾವಣೆಯಲ್ಲಿ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಶರತ್‌ಗೆ ಬೆಂಬಲ ನೀಡಿಲ್ಲ. ಎರಡು ಲಕ್ಷ ಮತದಾರನಿಗೆ ನಾನು ಹೇಗೆ ಪರೋಕ್ಷವಾಗಿ ಮಾತನಾಡಲಿ. ಆದರೆ, ಸೋಲಿನ ನಂತರ ಎಂಟಿಬಿ ನಡೆದುಕೊಂಡ ವರ್ತನೆ ಸರಿ ಇಲ್ಲ. 1200 ಕೋಟಿ ಹಣ ಇದೆ ಎಂದು ಅವರು ಅಹಂ ತೋರಿಸಿದರು. ಅಲ್ಲದೆ, ಸಿದ್ದರಾಮಯ್ಯಗೆ ಎಂಟಿಬಿ ನಾಗರಾಜ್ ಮೇಲೆ ಕೋಪ ಇತ್ತು. ಹೀಗಾಗಿ ಕುರುಬರ ಮತ ಇಬ್ಭಾಗವಾಗಿದ್ದು, ಎಂಟಿಬಿ ಸೋತಿದ್ದಾರೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News