ಸಿನಿಮಾ ಮಂದಿರಕ್ಕೆ ವೀಕ್ಷಕರು ಆಹಾರ,ನೀರು ಒಯ್ಯಬಹುದು: ಆರ್‌ಟಿಐ ಅರ್ಜಿಯಿಂದ ಬಹಿರಂಗ

Update: 2019-12-09 13:09 GMT

ಹೊಸದಿಲ್ಲಿ,ಡಿ.9: ಸಿನಿಮಾಪ್ರಿಯರು ತಮ್ಮದೇ ಆಹಾರ ಮತ್ತು ನೀರನ್ನು ತರುವುದನ್ನು ಮಲ್ಟಿಪ್ಲೆಕ್ಸ್‌ಗಳು ಮತ್ತು ಥಿಯೇಟರ್‌ಗಳು ನಿರ್ಬಂಧಿಸುವಂತಿಲ್ಲ ಎಂದು ಹೈದರಾಬಾದ್ ನಗರ ಪೊಲೀಸರು ಆರ್‌ಟಿಐ ಉತ್ತರವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ಮಂದಿರಗಳಿಗೆ ಆಹಾರ ಮತ್ತು ನೀರನ್ನು ಒಯ್ಯಲು ಕಾನೂನಿನ ನಿರ್ಬಂಧವಿಲ್ಲ ಮತ್ತು ಇಂತಹ ನಿದರ್ಶನಗಳು ಕಂಡುಬಂದಾಗ ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರನ್ನು ಸಲ್ಲಿಸಿದರೆ ಕಾನೂನು ಉಲ್ಲಂಘನೆಯಾಗುತ್ತಿದೆಯೇ ಎನ್ನುವುದನ್ನು ಅದು ಪರಿಶೀಲಿಸುತ್ತದೆ ಎಂದು ಪೊಲೀಸರು ಹೈದರಾಬಾದಿನ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ವಿಜಯ ಗೋಪಾಲ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

1955ರ ಸಿನಿಮಾ ನಿಯಂತ್ರಣ ಕಾಯ್ದೆಯಡಿ ವೀಕ್ಷಕರು ತಮ್ಮ ಆಹಾರ ಮತ್ತು ನೀರನ್ನು ಥಿಯೇಟರ್‌ಗಳಿಗೆ ಒಯ್ಯಲು ಯಾವುದೇ ನಿರ್ಬಂಧಗಳಿಲ್ಲ. ಆದರೂ ಹೆಚ್ಚಿನ ಮಲ್ಟಿಪ್ಲೆಕ್ಸ್‌ಗಳು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ವೀಕ್ಷಕರು ಆಹಾರ ಮತ್ತು ಪಾನೀಯಗಳನ್ನು ತರಲು ಅವಕಾಶ ನೀಡುತ್ತಿಲ್ಲ.

ಎರಡು ವರ್ಷಗಳ ಹಿಂದೆ ವಿಜಯ ಗೋಪಾಲ ಐನಾಕ್ಸ್ ವಿರುದ್ಧ ಹೈದರಾಬಾದ್ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.ವಿಚಾರಣೆ ನಡೆಸಿದ ವೇದಿಕೆಯು ಅವರಿಗೆ 5000 ರೂ.ಗಳ ಪರಿಹಾರದ ಜೊತೆಗೆ ನೀರಿನ ಬಾಟಲಿಗೆ ಹೆಚ್ಚುವರಿ ದರವನ್ನು ವಸೂಲು ಮಾಡಿದ್ದಕ್ಕೆ 1,000 ರೂ.ಗಳನ್ನು ಪಾವತಿಸುವಂತೆ ಐನಾಕ್ಸ್‌ಗೆ ಆದೇಶಿಸಿತ್ತು.

ಯಾವುದೇ ಏಕಪರದೆ ಚಿತ್ರಮಂದಿರವು 3ಡಿ ಕನ್ನಡಕಗಳನ್ನು ಒದಗಿಸಲು ಗ್ರಾಹಕರಿಂದ ಹಣವನ್ನು ಪಡೆಯುವಂತಿಲ್ಲ ಎಂದೂ ಆರ್‌ಟಿಐ ಉತ್ತರವು ತಿಳಿಸಿದೆ. ಆದರೆ ಕೆಲವು ಮಲ್ಟಿಪ್ಲೆಕ್ಸ್‌ಗಳಿಗೆ ಇದಕ್ಕೆ ಅವಕಾಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಗ್ರಾಹಕರು ತಮ್ಮದೇ ಆದ 3ಡಿ ಕನ್ನಡಕಗಳನ್ನು ಥಿಯೇಟರ್‌ಗೆ ಒಯ್ಯುವುದನ್ನು ನಿರ್ಬಂಧಿಸುವ ಯಾವುದೇ ನಿಯಮಗಳಿಲ್ಲ. 3ಡಿ ಕನ್ನಡಕಕ್ಕಾಗಿ ಶುಲ್ಕವನ್ನು ವಿಧಿಸುವ ಥಿಯೇಟರ್‌ಗಳು ಆ ಬಗ್ಗೆ ರಸೀದಿಯನ್ನು ನೀಡದಿದ್ದರೆ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರನ್ನು ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News