ಜನತಾ ನ್ಯಾಯಾಲಯದಲ್ಲಿ 'ಅನರ್ಹ'ರಿಗೆ ಮನ್ನಣೆ: ಸ್ಪಷ್ಟ ಬಹುಮತದ ಗಡಿ ದಾಟಿದ ಬಿಜೆಪಿ ಸರಕಾರ

Update: 2019-12-09 13:54 GMT

ಬೆಂಗಳೂರು, ಡಿ.9: ದೇಶದ ಗಮನ ಸೆಳೆದಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಅನರ್ಹತೆಯ ಹಣೆಪಟ್ಟಿಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ಬಿಜೆಪಿ ಅಭ್ಯರ್ಥಿಗಳ ಪೈಕಿ ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಹೊರತುಪಡಿಸಿ ಎಲ್ಲರಿಗೂ ಜನತಾ ನ್ಯಾಯಾಲಯದಲ್ಲಿ ಮನ್ನಣೆ ಸಿಕ್ಕಿದೆ.

15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವು ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳ ಗಡಿಯನ್ನು ದಾಟಿದೆ. ವಿಧಾನಸಭೆಯಲ್ಲಿ ಪಕ್ಷೇತರ ಸದಸ್ಯರೊಬ್ಬರ ಬೆಂಬಲದೊಂದಿಗೆ 107 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ, ಇದೀಗ ಉಪ ಚುನಾವಣೆಯ ಫಲಿತಾಂಶದ ಬಳಿಕ ತನ್ನ ಸಂಖ್ಯಾಬಲವನ್ನು 119ಕ್ಕೆ ವೃದ್ಧಿಸಿಕೊಂಡಿದೆ.

ಹೊಸಕೋಟೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ‘ಸ್ವಾಭಿಮಾನಿ’ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶರತ್ ಬಚ್ಚೇಗೌಡ(ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಮಗ) 11,486 ಮತಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎ.ಬಸವರಾಜ (ಭೈರತಿ) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎಂ.ನಾರಾಯಣಸ್ವಾಮಿ ವಿರುದ್ಧ 63,443 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2013 ಹಾಗೂ 2018ರಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಸವರಾಜ ಗೆಲುವು ಸಾಧಿಸಿದ್ದರು.

ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದ ಕೆ.ಆರ್.ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತವರಿನ ಮತದಾರರು ಉಡುಗೊರೆ ನೀಡಿದ್ದಾರೆ. 'ಬಿಜೆಪಿ ಪಕ್ಷ ನನ್ನನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆ, ನನ್ನ ತವರಿನಲ್ಲಿ ನಾನು ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ ಎಂಬ ನೋವಿದೆ ಎಂದು ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಭಾಷಣ ಮಾಡಿದ್ದರು.

ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರರ ಸವಾಲಿನಲ್ಲಿ ರಮೇಶ್ ಜಾರಕಿಹೊಳಿ ಮೇಲುಗೈ ಸಾಧಿಸುವ ಮೂಲಕ, ಗೋಕಾಕ್‌ಗೆ ನಾನೇ ‘ಸಾಹುಕಾರ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಜೊತೆ ಕೈ ಜೋಡಿಸುವ ಮೂಲಕ ‘ಕ್ಷಿಪ್ರ ಕ್ರಾಂತಿ’ ಮಾಡುವುದಾಗಿ ಹೇಳಿದ್ದ ಎಚ್.ವಿಶ್ವನಾಥ್‌ಗೆ ಹುಣಸೂರು ಕ್ಷೇತ್ರದ ಜನ ಸೋಲಿನ ರುಚಿ ತೋರಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಹುಣಸೂರು ಕ್ಷೇತ್ರವನ್ನು ಪುನಃ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ರೋಷನ್ ಬೇಗ್ ಹಾಗೂ ಅವರ ಬೆಂಬಲಿಗ ಕಾರ್ಪೋರೇಟರ್‌ಗಳು ಬಿಜೆಪಿಗೆ ಬಹಿರಂಗ ಬೆಂಬಲ ನೀಡಿದರೂ ಸಹ, ಮತದಾರರು ಯುವ ಮುಖಂಡ, ವಿಧಾನಪರಿಷತ್ ಸದಸ್ಯ ರಿಝ್ವಾನ್ ಅರ್ಷದ್ ಕೈ ಹಿಡಿಯುವ ಮೂಲಕ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗುವಂತೆ ಆಶೀರ್ವಾದ ಮಾಡಿದ್ದಾರೆ.

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಆರ್.ಶಂಕರ್ ಬದಲು ಅರುಣ್‌ ಕುಮಾರ್ ಅವರನ್ನು ಕಣಕ್ಕಿಳಿಸಿದ್ದ ಬಿಜೆಪಿ, ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮತ್ತೊಮ್ಮೆ ಸೋಲಿನ ರುಚಿ ಅನುಭವಿಸುವಂತೆ ಮಾಡಿದೆ.

ತೀವ್ರ ಪೈಪೋಟಿ ಎದುರಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎಂ.ಆಂಜನಪ್ಪ ಅವರನ್ನು 34,801 ಮತಗಳ ಅಂತರದಿಂದ ಸೋಲಿಸುವ ಮೂಲಕ ಇದೇ ಮೊದಲ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ.

ಸ್ಥಿರ ಸರಕಾರಕ್ಕೆ ಮತದಾರನ ಒಪ್ಪಿಗೆ

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಪ್ರತಿದಿನ ನಡೆಯುತ್ತಿದ್ದಂತಹ ಹಗ್ಗಜಗ್ಗಾಟಗಳಿಂದ ಬೇಸತ್ತಿದ್ದ ಮತದಾರರು, ರಾಜ್ಯದಲ್ಲಿ ಸುಸ್ಥಿರ ಹಾಗೂ ಸುಭದ್ರ ಸರಕಾರಕ್ಕಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಸಚಿವರ ನೇತೃತ್ವದ ಉಸ್ತುವಾರಿ ತಂಡಗಳ ರಚನೆ ಯಶಸ್ಸು ತಂದುಕೊಟ್ಟಿದೆ.

ಸಿದ್ದರಾಮಯ್ಯ ‘ಏಕಾಂಗಿ’ ಪ್ರಚಾರ

ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಪರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರ್ಜರಿಯಾಗಿ ಪ್ರಚಾರ ನಡೆಸಿದರೂ ಅವರಿಗೆ ಪಕ್ಷದ ಇತರ ಪ್ರಮುಖ ನಾಯಕರಿಂದ ನಿರೀಕ್ಷಿತ ಸಹಕಾರ ದೊರಕದಿರುವುದು ಮೇಲ್ನೋಟಕ್ಕೆ ಕಂಡು ಬಂದಿತು. ಬಿಜೆಪಿಯವರು ಇದೇ ವಿಚಾರವನ್ನು ಮುಂದಿಟ್ಟುಕೊಂಡು ‘ಏಕಾಂಗಿ’ ಸಿದ್ದರಾಮಯ್ಯ ಎಂದು ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್‌ನ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನದಲ್ಲಿ ಸಫಲರಾದರು.

ಜೆಡಿಎಸ್‌ನಲ್ಲಿ ಹೊಂದಾಣಿಕೆ ಕೊರತೆ

ಜೆಡಿಎಸ್ ಪಕ್ಷದಲ್ಲಿ ನಾಯಕತ್ವ ಹಾಗೂ ಮುಖಂಡರ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಶೂನ್ಯ ಸಂಪಾದನೆ ಮಾಡಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುಂದುವರೆದ ಪರಿಣಾಮವಾಗಿ ತನ್ನ ಭದ್ರಕೋಟೆಯಾಗಿದ್ದ ಕೆ.ಆರ್.ಪೇಟೆಯನ್ನು ಕಳೆದುಕೊಂಡಿತು.

ಕೆ.ಆರ್.ಪುರ: ಭೈರತಿ ಬಸವರಾಜ(ಬಿಜೆಪಿ)-1,39,879, ಎಂ.ನಾರಾಯಣಸ್ವಾಮಿ(ಕಾಂಗ್ರೆಸ್)- 76,436, ಗೆಲುವಿನ ಅಂತರ- 63,443

ಅಥಣಿ: ಮಹೇಶ್ ಕುಮಟಳ್ಳಿ(ಬಿಜೆಪಿ)-99,203, ಗಜಾನನ ಮಂಗಸೂಳಿ(ಕಾಂಗ್ರೆಸ್)-59,214, ಗೆಲುವಿನ ಅಂತರ-39,989.

ಶಿವಾಜಿನಗರ: ರಿಝ್ವಾನ್ ಅರ್ಶದ್(ಕಾಂಗ್ರೆಸ್)-49,890, ಎಂ.ಸರವಣ(ಬಿಜೆಪಿ)-36,369, ಗೆಲುವಿನ ಅಂತರ-13,521.

ಕಾಗವಾಡ: ಶ್ರೀಮಂತ್‌ ಪಾಟೀಲ್(ಬಿಜೆಪಿ)-76,952, ರಾಜು ಕಾಗೆ(ಕಾಂಗ್ರೆಸ್)-58,395, ಗೆಲುವಿನ ಅಂತರ-18,557.

ಗೋಕಾಕ್: ರಮೇಶ್ ಜಾರಕಿಹೊಳಿ(ಬಿಜೆಪಿ)-87,450, ಲಖನ್ ಜಾರಕಿಹೊಳಿ(ಕಾಂಗ್ರೆಸ್)-58,444, ಗೆಲುವಿನ ಅಂತರ-29,006.

ಯಲ್ಲಾಪುರ: ಅರಬೈಲು ಶಿವರಾಮ್ ಹೆಬ್ಬಾರ್(ಬಿಜೆಪಿ)-80,442, ಭೀಮಾ ನಾಯ್ಕ(ಕಾಂಗ್ರೆಸ್)-49,034, ಗೆಲುವಿನ ಅಂತರ-31,408.

ಹಿರೇಕೆರೂರು: ಬಿ.ಸಿ.ಪಾಟೀಲ್(ಬಿಜೆಪಿ)-85,562, ಬಿ.ಎಚ್.ಬನ್ನಿಕೋಡ್(ಕಾಂಗ್ರೆಸ್)-56,495, ಗೆಲುವಿನ ಅಂತರ-29,067.

ರಾಣೆಬೆನ್ನೂರು: ಅರುಣ್‌ ಕುಮಾರ್ ಗೊತ್ತೂರ್(ಬಿಜೆಪಿ)-95,438, ಕೆ.ಬಿ.ಕೋಳಿವಾಡ್(ಕಾಂಗ್ರೆಸ್)-72,216, ಗೆಲುವಿನ ಅಂತರ-23,222.

ವಿಜಯನಗರ: ಆನಂದ್‌ ಸಿಂಗ್(ಬಿಜೆಪಿ)-85,477, ವಿ.ವೈ.ಘೋರ್ಪಡೆ (ಕಾಂಗ್ರೆಸ್)-55,352, ಗೆಲುವಿನ ಅಂತರ-30,125.

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್(ಬಿಜೆಪಿ)-84,389, ಎಂ.ಆಂಜನಪ್ಪ (ಕಾಂಗ್ರೆಸ್)-49,588, ಗೆಲುವಿನ ಅಂತರ-34,801.

ಯಶವಂತಪುರ: ಎಸ್.ಟಿ.ಸೋಮಶೇಖರ್(ಬಿಜೆಪಿ)-1,44,722, ಟಿ.ಎನ್.ಜವರಾಯಿಗೌಡ(ಜೆಡಿಎಸ್)-1,17,023, ಗೆಲುವಿನ ಅಂತರ-27,699.

ಮಹಾಲಕ್ಷ್ಮಿ ಲೇಔಟ್: ಕೆ.ಗೋಪಾಲಯ್ಯ-85,889, ಎಂ.ಶಿವರಾಜು (ಕಾಂಗ್ರೆಸ್)-31,503, ಗೆಲುವಿನ ಅಂತರ-54,386.

ಹೊಸಕೋಟೆ: ಶರತ್ ಬಚ್ಚೇಗೌಡ(ಪಕ್ಷೇತರ)-81,671, ಎಂಟಿಬಿ ನಾಗರಾಜ್(ಬಿಜೆಪಿ)-70,185, ಗೆಲುವಿನ ಅಂತರ-11,486.

ಕೆ.ಆರ್.ಪೇಟೆ: ನಾರಾಯಣಗೌಡ(ಬಿಜೆಪಿ)-66,094, ಬಿ.ಎಲ್.ದೇವರಾಜ್(ಜೆಡಿಎಸ್)-56,363, ಗೆಲುವಿನ ಅಂತರ-9,731.

ಹುಣಸೂರು: ಎಚ್.ಪಿ.ಮಂಜುನಾಥ್(ಕಾಂಗ್ರೆಸ್)-92,725, ಎಚ್.ವಿಶ್ವನಾಥ್(ಬಿಜೆಪಿ)-52,998, ಗೆಲುವಿನ ಅಂತರ-39,727.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News