ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡುತ್ತೇನೆ: ವಿಜೇತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ

Update: 2019-12-09 14:35 GMT

ಮಂಡ್ಯ, ಡಿ.9: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕರಲ್ಲಿ ಕಮಲ ಅರಳಿಸಲು ಶ್ರಮಿಸುತ್ತೇನೆ ಎಂದು ಕೆ.ಆರ್ ಪೇಟೆ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೇಳಿದ್ದಾರೆ.

ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನನ್ನ ಗೆಲುವನ್ನು ಕ್ಷೇತ್ರದ ಜನತೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮರ್ಪಿಸಸುತ್ತೇನೆ. ಮಂಡ್ಯ ಜಿಲ್ಲೆಯು ಜೆಡಿಎಸ್ ಭದ್ರಕೋಟೆ ಎಂದು ಬೀಗುತ್ತಿದ್ದ ದಳಪತಿಗಳಿಗೆ ಉಪಚುನಾವಣೆಯ ಫಲಿತಾಂಶವು ತಕ್ಕ ಉತ್ತರ ನೀಡಿದೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ತುಂಬಲು ಇಂದಿನಿಂದಲೇ ಸಂಘಟನೆ ಆರಂಭಿಸುತ್ತೇನೆ. ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡುತ್ತೇನೆ. ಕೆ.ಆರ್.ಪೇಟೆ ತಾಲೂಕು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಟೀಕಾಕಾರರಿಗೆ ತಕ್ಕ ಉತ್ತರ ನೀಡುವೆ ಎಂದು ಅವರು ಸವಾಲು ಹಾಕಿದರು.

ಶಾಂತಿಯುತ ಚುನಾವಣೆಗೆ ಸಹಕಾರ ನೀಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಎಎಸ್ಪಿ ಡಾ.ಶೋಭಾರಾಣಿ, ಚುನಾವಣಾಧಿಕಾರಿ ಎಚ್..ಕೆ.ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಎಂ.ಶಿವಮೂರ್ತಿ ಅವರನ್ನು ನಾರಾಯಣಗೌಡ ಅಭಿನಂದಿಸಿದರು.

ನಾರಾಯಣಗೌಡ ಅಭಿಮಾನಿ ಬಳಗದ ಅಧ್ಯಕ್ಷ ಚಂದ್ರಮೋಹನ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್‍ಮುಲ್ ಮಾಜಿ ನಿರ್ದೇಶಕ ಎಸ್.ಅಂಬರೀಶ್, ಡಿ.ಪಿ.ಪರಮೇಶ್, ಕಿಕ್ಕೇರಿ ಕುಮಾರ್, ಮಂಡ್ಯ ನಾಗೇಶ್, ನಾಯಕನಹಳ್ಳಿ ಕುಮಾರ್ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News