ಇನ್ನು ಸೌದಿ ರೆಸ್ಟೋರೆಂಟ್‌ಗಳಲ್ಲಿ ಸ್ತ್ರೀ, ಪುರುಷರಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿಲ್ಲ

Update: 2019-12-09 15:52 GMT
ಫೊಟೋ ಕೃಪೆ: cnn.com

ರಿಯಾದ್ (ಸೌದಿ ಅರೇಬಿಯ), ಡಿ. 9: ಸೌದಿ ಅರೇಬಿಯದ ರೆಸ್ಟೋರೆಂಟ್‌ಗಳಲ್ಲಿ ಇನ್ನು ಮುಂದೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಪ್ರವೇಶ ದ್ವಾರಗಳಿರುವುದಿಲ್ಲ ಎಂದು ಅಧಿಕಾರಿಗಳು ರವಿವಾರ ಘೋಷಿಸಿದ್ದಾರೆ.

ಇದು ಸೌದಿ ಅರೇಬಿಯದಲ್ಲಿ ನಡೆಯುತ್ತಿರುವ ಬದಲಾವಣೆಗಳ ಪೈಕಿ ಇತ್ತೀಚಿನದ್ದಾಗಿದೆ.

ಇಲ್ಲಿಯವರೆಗೆ, ಸೌದಿ ಅರೇಬಿಯದ ರೆಸ್ಟೋರೆಂಟ್‌ಗಳಲ್ಲಿ ಎರಡು ಪ್ರವೇಶ ದ್ವಾರಗಳಿದ್ದವು. ಒಂದು ಕುಟುಂಬ ಸದಸ್ಯರೊಂದಿಗೆ ಬರುವವರು ಮತ್ತು ಮಹಿಳೆಯರಿಗಾಗಿ ಹಾಗೂ ಇನ್ನೊಂದು ಪುರುಷರಿಗಾಗಿ. ಇನ್ನು ಇದು ಕಡ್ಡಾಯವಾಗಿರುವುದಿಲ್ಲ ಎಂದು ಮುನಿಸಿಪಾಲಿಟಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಟ್ವಿಟರ್‌ನಲ್ಲಿ ಘೋಷಿಸಿದೆ.

ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅಧಿಕಾರಕ್ಕೆ ಬಂದ ಬಳಿಕ ಸಂಪ್ರದಾಯವಾದಿ ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಇವುಗಳಲ್ಲಿ ಪ್ರಮುಖವಾದುದು ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ ನೀಡಿರುವುದು ಹಾಗೂ ಸಿನೇಮಾದ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದು.

ಕಡ್ಡಾಯವಲ್ಲ:

ಆದರೂ, ರೆಸ್ಟೋರೆಂಟ್‌ಗಳ ಒಳಗಿನ ಪ್ರತ್ಯೇಕ ಆಸನ ವ್ಯವಸ್ಥೆಗಳನ್ನೂ ತೆಗೆದುಹಾಕಲಾಗುವುದೇ ಎನ್ನುವ ಪ್ರಶ್ನೆಗೆ ಸಚಿವಲಯದ ವಕ್ತಾರರೊಬ್ಬರು ಉತ್ತರಿಸಲಿಲ್ಲ ಎಂದು 'ರಾಯ್ಟರ್ಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅದೇ ವೇಳೆ, ಹೊಸ ನಿಯಮಗಳು ಕಡ್ಡಾಯವೇನಲ್ಲ. ಅಂದರೆ, ರೆಸ್ಟೋರೆಂಟ್‌ಗಳ ಮಾಲೀಕರು ಬಯಸಿದರೆ ಈಗಲೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಹೊಂದಬಹುದಾಗಿದೆ ಎಂದು ವಕ್ತಾರರು ತಿಳಿಸಿದರು ಎಂದು ಸುದ್ದಿ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News