ಈರುಳ್ಳಿ ಖರೀದಿಸಲು ಸರತಿ ಸಾಲಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

Update: 2019-12-09 16:04 GMT
Photo: PTI

ಅಮರಾವತಿ, ಡಿ.9: ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿದ್ದ ಈರುಳ್ಳಿ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡ ಎಂಬಲ್ಲಿ ಸೋಮವಾರ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಸರಕಾರ ಕೃಷಿ ಮಾರುಕಟ್ಟೆಯಲ್ಲಿ ಕಿ.ಗ್ರಾಂ ಒಂದಕ್ಕೆ 25 ರೂ.ಯಂತೆ ರಿಯಾಯ್ತಿ ದರದಲ್ಲಿ ಈರುಳ್ಳಿಯನ್ನು ಗ್ರಾಹಕರಿಗೆ ಒದಗಿಸುತ್ತಿದ್ದು ಇದನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದ 55 ವರ್ಷದ ಸಾಂಬಯ್ಯ ಎಂಬ ವ್ಯಕ್ತಿ ಕುಸಿದು ಬಿದ್ದು ಅಸ್ವಸ್ಥನಾಗಿದ್ದಾನೆ. ಆತನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

  ಘಟನೆಯ ಬಗ್ಗೆ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಪಕ್ಷ ತೆಲುಗುದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯ ಸಾವಿನ ಬಗ್ಗೆ ಸರಕಾರ ಯಾವುದೇ ಹೇಳಿಕೆ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸರಕಾರವು ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ನೇಮಿಸಿರುವ ಗ್ರಾಮ ಸ್ವಯಂಸೇವಕರು ಈರುಳ್ಳಿಯನ್ನೂ ಜನರ ಮನೆಗೇ ಯಾಕೆ ತಲುಪಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News