ಕುಸಿದ ಕಾಂಗ್ರೆಸ್ ಪ್ರಭಾವ: ಸಂಖ್ಯಾಬಲ ವೃದ್ಧಿಸಿಕೊಂಡ ಕಮಲ

Update: 2019-12-09 16:48 GMT

ಬೆಂಗಳೂರು, ಡಿ. 9: ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ತನ್ನ ಬಲವನ್ನು ಮತ್ತಷ್ಟು ವೃದ್ಧಿಸಿಕೊಂಡಿದೆ.

ಇದೇ ಮೊದಲ ಬಾರಿಗೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲ್ಲುವ ಮೂಲಕ ಮಂಡ್ಯ ಜಿಲ್ಲೆಯಲಿ ಬಿಜೆಪಿಯ ಕಮಲ ಅರಳಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ.

ಅದೇ ರೀತಿ ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಗೋಕಾಕ್ ಸೇರಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ಈ ನಡುವೆ ಬೆಂಗಳೂರು ನಗರದ ಯಶವಂತಪುರ, ಕೆ.ಆರ್.ಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು, ರಾಣೆಬೆನ್ನೂರು, ಬಳ್ಳಾರಿ ಜಿಲ್ಲೆಯ ವಿಜಯನಗರ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಕೈಯಿಂದ ಕಸಿದುಕೊಂಡಿದೆ. ಆ ಮೂಲಕ ಬಿಜೆಪಿ 105ರ ತನ್ನ ಸಂಖ್ಯಾಬಲವನ್ನು 117ಕ್ಕೆ ಹೆಚ್ಚಿಸಿಕೊಂಡಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ‘ಕೈ’ ಪ್ರಭಾವ ಕುಸಿದಿದ್ದು, ಆ ಪಕ್ಷದ ಸಂಘಟನೆಯ ದುಸ್ಥಿತಿಗೆ ಕನ್ನಡಿ ಹಿಡಿದಿದೆ. ಬಿಜೆಪಿಯ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಂತೆ ಆಗಿದೆ.

ಜೆಡಿಎಸ್‌ಗೆ ಮುಖಭಂಗ: ಕೆ.ಆರ್.ಪೇಟೆ, ಹುಣಸೂರು ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಉಪ ಚುನಾವಣೆಯಲ್ಲಿ ಹುಣಸೂರನ್ನು ಕಾಂಗ್ರೆಸ್ಸಿಗೆ ಮತ್ತೆರಡು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡುವ ಮೂಲಕ ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News