ಅನರ್ಹರಿಗೆ ‘ಅರ್ಹ’ ಪ್ರಮಾಣಪತ್ರ ನೀಡಿದ ಮತದಾರ

Update: 2019-12-09 16:44 GMT

ಬೆಂಗಳೂರು, ಡಿ. 9: ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ 13 ‘ಅನರ್ಹ ಶಾಸಕರ’ ಪೈಕಿ 11 ಮಂದಿಯನ್ನು ಗೆಲ್ಲಿಸುವ ಮೂಲಕ ಅನರ್ಹರಿಗೆ ‘ಅರ್ಹ’ ಪಟ್ಟವನ್ನು ಮತದಾರ ನೀಡಿದ್ದಾನೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಪತನಕ್ಕೆ ಮೂಲ, ‘ಕ್ಷಿಪ್ರ ಕ್ರಾಂತಿ’ ರೂವಾರಿ ಎನ್ನಲಾದ ಹುಣಸೂರು ಕ್ಷೇತ್ರ ಅನರ್ಹ ಶಾಸಕ ಎಚ್.ವಿಶ್ವನಾಥ್, ಹೊಸಕೋಟೆ ಕ್ಷೇತ್ರದ ಅತ್ಯಂತ ‘ಶ್ರೀಮಂತ’ ರಾಜಕಾರಣಿ ಎಂಟಿಬಿ ನಾಗರಾಜ್ ಹೊರತುಪಡಿಸಿ ಉಳಿದ 11 ‘ಅನರ್ಹರು’ ಜಯದ ನಗೆ ಬೀರಿದ್ದಾರೆ.

ಕೆ.ಆರ್.ಪುರ-ಬೈರತಿ ಬಸವರಾಜ್, ಯಶವಂತಪುರ-ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್-ಕೆ.ಗೋಪಾಲಯ್ಯ, ವಿಜಯನಗರ-ಆನಂದ್ ಸಿಂಗ್, ಕೆ. ಆರ್.ಪೇಟೆ-ನಾರಾಯಣಗೌಡ, ಯಲ್ಲಾಪುರ-ಶಿವರಾಂ ಹೆಬ್ಬಾರ್, ಹಿರೇಕೆರೂರು- ಬಿ.ಸಿ.ಪಾಟೀಲ್, ಗೋಕಾಕ್-ರಮೇಶ್ ಜಾರಕಿಹೊಳಿ, ಅಥಣಿ-ಮಹೇಶ್ ಕುಮಟಳ್ಳಿ, ಕಾಗವಾಡ-ಶ್ರೀಮಂತ ಪಾಟೀಲ್, ಚಿಕ್ಕಬಳ್ಳಾಪುರ- ಡಾ.ಕೆ. ಸುಧಾಕರ್ ಗೆಲುವು ಸಾಧಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದಲೇ ‘ಅನರ್ಹ’ ಪಟ್ಟಕಟ್ಟಿಕೊಂಡ ಮೇಲ್ಕಂಡವರೆಲ್ಲ ಪಕ್ಷಕ್ಕೆ ದ್ರೋಹ ಬಗೆದವರು, ಮಾರಾಟಗೊಂಡವರು ಎಂದು ಕಾಂಗ್ರೆಸ್-ಜೆಡಿಎಸ್ ಪ್ರಚಾರಕ್ಕೆ ರಾಜ್ಯದ ಮತದಾರರು ಮನ್ನಣೆ ನೀಡಿಲ್ಲ. ಆಡಳಿತಾರೂಢ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಮತದಾರರು ಬೆಂಬಲ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ‘ಅನರ್ಹರು’ ವೈಯಕ್ತಿಕ ವರ್ಚಸ್ಸು, ತಮ್ಮ ಗೆಲ್ಲುವ ಸಾಮರ್ಥ್ಯ ಹಾಗೂ ಬಿಜೆಪಿ ಸಂಘಟಿತ ಹೋರಾಟದಿಂದ ಗೆಲುವು ಸಾಧಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ವಿಪಕ್ಷಗಳ ಅಭ್ಯರ್ಥಿಗಳ ಬಲಹೀನತೆಯಿಂದ ಬಿಜೆಪಿಗೆ ನಿರಾಯಾಸ ಗೆಲುವು ದಕ್ಕಿದೆ.

ಆಡಳಿತ ಪಕ್ಷದಲ್ಲಿದ್ದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುತ್ತದೆ. ಅನರ್ಹರು ಗೆದ್ದರೆ ಬಿಎಸ್‌ವೈ ಸರಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಲಿದ್ದಾರೆಂಬ ಮತದಾರರ ಲೆಕ್ಕಾಚಾರ, ಬಿಎಸ್‌ವೈ ಹಾಗೂ ಬಿಜೆಪಿಯ ಪ್ರಚಾರ ತಂತ್ರ ಅನರ್ಹರ ಗೆಲುವಿಗೆ ಮುಖ್ಯ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News