ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನಾ ಜಾಥಾ ಹಿನ್ನೆಲೆ : ಮೂರು ಮೆಟ್ರೊ ರೈಲು ನಿಲ್ದಾಣ ಬಂದ್

Update: 2019-12-09 17:02 GMT

ಹೊಸದಿಲ್ಲಿ, ಡಿ.9: ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳು ಸೋಮವಾರ ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ಜಾಥಾ ನಡೆಸುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ದಿಲ್ಲಿಯ ಮೂರು ಮೆಟ್ರೊ ರೈಲು ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

ದಿಲ್ಲಿ ಪೊಲೀಸರ ಸಲಹೆಯಂತೆ ಉದ್ಯೋಗ ಭವನ, ಲೋಕಕಲ್ಯಾಣ ಮಾರ್ಗ ಮತ್ತು ಸೆಂಟ್ರಲ್ ಸೆಕ್ರೆಟೇರಿಯಟ್ ರೈಲು ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಉದ್ಯೋಗ ಭವನ ಮತ್ತು ಲೋಕಕಲ್ಯಾಣ ಮಾರ್ಗ ನಿಲ್ದಾಣಗಳಲ್ಲಿ ಮೆಟ್ರೋ ರೈಲು ನಿಲುಗಡೆಯಾಗುವುದಿಲ್ಲ ಎಂದು ದಿಲ್ಲಿ ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.

ಸೆಂಟ್ರಲ್ ಸೆಕ್ರೆಟೇರಿಯಟ್ ರಾಷ್ಟ್ರಪತಿ ಭವನಕ್ಕೆ ಅತೀ ಸನಿಹದ ಮೆಟ್ರೊ ನಿಲ್ದಾಣವಾಗಿದ್ದರೆ ಲೋಕಕಲ್ಯಾಣ ಮಾರ್ಗ ನಿಲ್ದಾಣ ಪ್ರಧಾನಿಯವರ ಸರಕಾರಿ ನಿವಾಸದ ಬಳಿಯಿದೆ. ಹಾಸ್ಟೆಲ್ ಶುಲ್ಕವನ್ನು 300% ಹೆಚ್ಚಿಸಿರುವುದನ್ನು ವಿರೋಧಿಸಿ ಕಳೆದ ತಿಂಗಳಿನಿಂದ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News