ಸಂಸದ ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಎಂಟಿಬಿ ನಾಗರಾಜ್ ಆಗ್ರಹ

Update: 2019-12-09 17:50 GMT

ಬೆಂಗಳೂರು, ಡಿ.9: ಸಂಸದ ಬಚ್ಚೇಗೌಡ ಪುತ್ರ ವ್ಯಾಮೋಹದಿಂದ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿಲ್ಲ. ಅವರ ವಿರುದ್ಧ ಪಕ್ಷ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಗ್ರಹಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಸಂಸದ ಬಚ್ಚೇಗೌಡ ಶಾಸಕರಾಗಿ, ಸಂಸದರಾಗಿ, ಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಉರುಳಿಸುವ ಸಂದರ್ಭದಲ್ಲಿ ನಾನು ರಾಜೀನಾಮೆ ನೀಡಬೇಕಾದರೆ ಎಲ್ಲ ರೀತಿಯ ಸಹಕಾರ ನೀಡಿದ್ದರು. ಆದರೆ, ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ, ನನ್ನನ್ನು ಬೆಂಬಲಿಸಲಿಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷರು ಹಾಗೂ ನಾಯಕರು ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಬೇಕು. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ತಡೆಯಲು ಇದು ಹೆಜ್ಜೆ ಗುರುತಾಗಬೇಕು ಎಂದು ಅವರು ಹೇಳಿದರು.

ಫಲಿತಾಂಶ ಸ್ವಾಗತಿಸುವೆ: ಜನರು ನೀಡಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಅದೇ ರೀತಿ ನನಗೆ ಮತ ಚಲಾಯಿಸಿದ 71 ಸಾವಿರ ಜನರಿಗೂ ಅಭಿನಂದನೆ ಸಲ್ಲಿಸುವೆ. ಉಪ ಚುನಾವಣೆಯಲ್ಲಿ ನನ್ನ ಜತೆಯಲ್ಲಿದ್ದ ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ, ಬಿಜೆಪಿ ನಾಯಕರಿಗೆ ಧನ್ಯವಾದ ಸಲ್ಲಿಸುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News