ಪೌರ ಕಾರ್ಮಿಕರ ಕೆಲಸ ಮಾಡದಿದ್ದರೆ ಅಟ್ರಾಸಿಟಿ ಪ್ರಕರಣ: ಜಗದೀಶ್‍ ಹಿರೇಮಣಿ

Update: 2019-12-09 18:25 GMT

ತುಮಕೂರು, ಡಿ.9: ಸಫಾಯಿ ಕರ್ಮಚಾರಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡದ ಅಧಿಕಾರಿಗಳನ್ನು ದೆಹಲಿ ನ್ಯಾಯಾಲಯಕ್ಕೆ ಕರೆಸಿ, ಅಟ್ರಾಸಿಟಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸಫಾಯಿ ಕರ್ಮಚಾರಿಗಳಿಗೆ ನೀಡಬೇಕಾದ ಸೌಲಭ್ಯವನ್ನು ಕಾಲಕಾಲಕ್ಕೆ ನೀಡಬೇಕು, ಪೌರ ಕಾರ್ಮಿಕರಿಗೆ ಭವಿಷ್ಯ ನಿಧಿ ವಂತಿಗೆ ಕಟ್ಟದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಪಾವಗಡ ಪುರಸಭೆಯಲ್ಲಿ ಪೌರ ಕಾರ್ಮಿಕರ ವಸತಿಗಾಗಿ ಗುರುತಿಸಿರುವ ಭೂಮಿಯಲ್ಲಿ ಬಂಡೆ ಇದ್ದು, ಈ ಜಾಗದಲ್ಲಿ ಮನೆ ಕಟ್ಟಲು ಆಗುವುದಿಲ್ಲ ಎಂದು ಪೌರ ಕಾರ್ಮಿಕರು ಸಮಸ್ಯೆಯನ್ನು ಬಿಚ್ಚಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಹಿರೇಮಣಿ ಅವರು, ಆ ಜಾಗದಲ್ಲಿ ಮನೆಕಟ್ಟಲು ಆಗದಿದ್ದ ಮೇಲೆ ಬೇರೆ ಜಾಗ ಗುರುತಿಸಿ, ಸದರಿ ಜಾಗ ಮನೆ ಕಟ್ಟಲು ಯೋಗ್ಯವೋ ಅಲ್ಲವೋ ಎಂಬ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಂದ ವರದಿ ಪಡೆಯುವಂತೆ ಸೂಚಿಸಿದರು.
ಚಿಕ್ಕನಾಯಕಹಳ್ಳಿ ಪುರಸಭೆ ಪೌರ ಕಾರ್ಮಿಕರು 2011ರಿಂದ ಭವಿಷ್ಯ ನಿಧಿ ವಂತಿಗೆ ಕಟ್ಟುತ್ತಿರುವ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ, ಕಳೆದ ಮೂರು ವರ್ಷಗಳಿಂದ ಇದೇ ರೀತಿ ಮಾಡುತ್ತಿದ್ದಾರೆ, ಪ್ರತಿಭಟನೆ ಮಾಡಿ, ದಿನಗಟ್ಟಲೆ ಕಚೇರಿ ಮುಂದೆ ಕುಳಿದ್ದರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಲವತ್ತುಕೊಂಡರು.

ಚಿ.ನಾ.ಹಳ್ಳಿ ಪುರಸಭೆ ಮುಖ್ಯಾಧಿಕಾರಿ ಮಾತನಾಡಿ, 2011ರಿಂದ ಭವಿಷ್ಯ ನಿಧಿ ಕಟ್ಟದ್ದರಿಂದ 61ಲಕ್ಷ ರೂ ವಂತಿಗೆ ಕಟ್ಟಲು ಭವಿಷ್ಯ ನಿಧಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದು, ಹಣ ಕಟ್ಟಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಆಗ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಪೌರ ಕಾರ್ಮಿಕರು ಸತ್ತು ಹೋಗಿದ್ದಾರೆ. ಅವರಿಗೆ ಹೇಗೆ ಸೌಲಭ್ಯ ನೀಡುತ್ತೀರಾ? ಎಂದು ಹಿರೇಮಣಿ ಅವರು ಪ್ರಶ್ನಿಸಿದರು.

ಪೌರ ಕಾರ್ಮಿಕರಿಗೆ ವೈಯಕ್ತಿಕವಾಗಿ ಇಎಸ್‍ಐ, ಪಿಎಫ್ ಕಟ್ಟುತ್ತಿರುವ ದಾಖಲೆಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡುವಂತೆ ಎಲ್ಲ ಪುರಸಭೆ, ಪಟ್ಟಣ ಪಂಚಾಯತಿ, ನಗರಸಭೆ, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಕೇಶ್‍ ಕುಮಾರ್ ಸೂಚಿಸಿದರು.

ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರ ವಸತಿಗಾಗಿ ಭೂಮಿಯನ್ನು ನಿಗದಿ ಮಾಡಿದ್ದರೂ ಹಂಚುತ್ತಿಲ್ಲ ಏಕೆ ಎಂದು ಪಾಲಿಕೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು, ಗುರುತಿಸಿರುವ ಜಾಗವನ್ನು ಹಂಚಿ ಮಾಡಿ ಪೌರ ಕಾರ್ಮಿಕರಿಗೆ ವಸತಿ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕು, ಇನ್ನೊಂದು ತಿಂಗಳಲ್ಲಿ ಈ ಕೆಲಸವನ್ನು ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯಿಂದ ಆರು ತಿಂಗಳಿಂದ ಪೌರ ಕಾರ್ಮಿಕರಿಗೆ ತಿಂಡಿ ನೀಡಿಲ್ಲ, ಇಂದಿರಾ ಕ್ಯಾಟೀನ್‍ನಿಂದ ತಿಂಡಿ ನೀಡಲು ಪಾಲಿಕೆ ಸಾಮಾನ್ಯ ಸಭೆ ಒಪ್ಪಿಗೆ ನೀಡಿದ್ದು, ಮುಂದಿನ ತಿಂಗಳಿಂದ ನೀಡಲಾಗುವುದು ಎಂದು ಪರಿಸರ ಇಂಜಿನಿಯರ್ ಸಭೆಗೆ ತಿಳಿಸಿದರು, ಇದು ಅವೈಜ್ಞಾನಿಕವಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಿಂದ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ, ಇಂದಿರಾ ಕ್ಯಾಂಟೀನ್‍ನಿಂದ ಪೌರ ಕಾರ್ಮಿಕರಿಗೆ ತಿಂಡಿ ನೀಡಿದ ಜನ ಸಾಮಾನ್ಯರಿಗೆ ನೀಡಲು ತೊಂದರೆಯಾಗುತ್ತದೆ. ಪೌರ ಕಾರ್ಮಿಕರಿಗೆ ಪ್ರತ್ಯೇಕವಾಗಿ ತಿಂಡಿ ನೀಡಿ ಇಲ್ಲ ಪೌರಾಡಳಿತ ಇಲಾಖೆಯಿಂದ ಒಪ್ಪಿಗೆ ಪಡೆದು ನೀಡಿ ಎಂದರು.

ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‍ನಿಂದ ನೀಡುವ ತಿಂಡಿ ನೀಡದಂತೆ ಸೂಚನೆ ಹಿರೇಮಣಿ ಅವರು, ಇಂದಿರಾ ಕ್ಯಾಂಟೀನ್‍ನಲ್ಲಿ ಐದು ರೂಪಾಯಿಗೆ ತಿಂಡಿ ಸಿಗುತ್ತದೆ, ಉಳಿದ ಹಣವನ್ನು ಪೌರ ಕಾರ್ಮಿಕರಿಗೆ ನೀಡಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಮೊದಲು ತಿಂಡಿ ನೀಡಿ, ಹಣವನ್ನು ಪೌರ ಕಾರ್ಮಿಕರ ಖಾತೆಗೆ ಹಾಕಿ, ಹದಿನೈದು ದಿನದಲ್ಲಿ ತಿಂಡಿ ನೀಡುವುದನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.

ಕೊರಟಗೆರೆ ಪಟ್ಟಣ ಪಂಚಾಯತ್ ನಲ್ಲಿ ಆರು ತಿಂಗಳಿಂದ ಪೌರ ಕಾರ್ಮಿಕರಿಗೆ ತಿಂಡಿ ಕೊಟ್ಟಿಲ್ಲ. ಸರ್ಕಾರದ ಆದೇಶವಾದಗಿನಿಂದ ಇಲ್ಲಿಯವರೆಗೆ ಹಣವನ್ನು ಪೌರ ಕಾರ್ಮಿಕರಿಗೆ ನೀಡಬೇಕು. ಸರ್ಕಾರಿ ಆದೇಶಕ್ಕೆ ಬೆಲೆ ಇಲ್ಲವೇ? ಎಂದು ಕೊರಟಗೆರೆ ಮುಖ್ಯಾಧಿಕಾರಿ ಲಕ್ಷ್ಮಣ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವಚ್ಚತಾಗಾರರನ್ನಾಗಿ ಕೆಲಸ ಮಾಡುತ್ತಿದ್ದವರನ್ನು ನೇಮಿಸಿಕೊಳ್ಳಲಾಗಿದೆಯೇ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳನ್ನು ಪ್ರಶ್ನಿಸಿದ ಜಗದೀಶ್ ಹಿರೇಮಣಿ ಅವರು, ಬಹುತೇಕ ಹಳೆಯವರನ್ನು ತೆಗೆದುಕೊಳ್ಳಲಾಗಿದೆ. ಪೌರಕಾರ್ಮಿಕ ಹುದ್ದೆಗೆ 7ನೇ ತರಗತಿ ವ್ಯಾಸಂಗ ಮಾಡಿರಬೇಕು ಎಂಬ ನಿಯಮ ಮಾಡಿರುವುದರಿಂದ ಹಳಬರನ್ನು ತೆಗೆದುಕೊಳ್ಳಲು ಆಗಿಲ್ಲ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ವಿದ್ಯಾರ್ಹತೆ ಇಲ್ಲ ಇನ್ನು ಗ್ರಾಮ ಪಂಚಾಯತ್ ನಲ್ಲಿ ಏಕೆ? ಅವೈಜ್ಞಾನಿಕ ಕ್ರಮದಿಂದ ನೈಜ ಕಾರ್ಮಿಕರನ್ನು ಹೊರಗಿಡುತ್ತಿರುವುದು ಸರಿಯಲ್ಲ. ಪೌರ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಗುರುತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಹಿರೇಮಣಿ ಅವರು, ಸಂಬಳ ಇಲ್ಲದಾಗ ದುಡಿಸಿಕೊಂಡು ಈಗ ಹೊರಗಿಡುತ್ತೀರಾ ? ಗ್ರಾಮ ಪಂಚಾಯತ್ ಮಟ್ಟದಲ್ಲಿ ತನಿಖೆಯಾಗಲಿ. ನೈಜ ಫಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಅಧಿಕಾರಿಗಳು ಕೆಲಸ ಮಾಡಬೇಕು. ಅಧ್ಯಕ್ಷರಿಗೆ, ಪಿಡಿಒಗೆ ಬೇಕಾದವರನ್ನು ಕಳುಹಿಸುತ್ತಾರೆ ಅದನ್ನು ಒಪ್ಪುತ್ತೀರಾ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಎಸ್ಪಿ ವಂಶಿಕೃಷ್ಣ, ಸಿಇಒ ಶುಭಾ ಕಲ್ಯಾಣ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮನಾಥ್, ಡಿಎಚ್‍ಒ ಚಂದ್ರಕಲಾ, ನಗರಾಭಿವೃದ್ಧಿ ಕೋಶದ ನಿರ್ದೇಶಕ ರಂಗಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಂಗೇಗೌಡ, ಬಿಸಿಎಂ ಅಧಿಕಾರಿ ಸುಭ್ರಾನಾಯ್ಕ್, ಪರಿಶಿಷ್ಟ ಪಂಗಡದ ಕಲ್ಯಾಧಿಕಾರಿ ಪ್ರೇಮಾ, ಸಫಾಯಿ ಕರ್ಮಚಾರಿ ಸದಸ್ಯ ಕದರಪ್ಪ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News