​ಉದ್ಯೋಗಾರ್ಹ ಪ್ರತಿಭೆಗಳು ಅತ್ಯಧಿಕ ಯಾವ ರಾಜ್ಯದಲ್ಲಿ ಗೊತ್ತೇ?

Update: 2019-12-10 03:34 GMT

ಹೊಸದಿಲ್ಲಿ, ಡಿ.10: ಗರಿಷ್ಠ ಉದ್ಯೋಗಾರ್ಹ ಪ್ರತಿಭೆಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ತಮಿಳುನಾಡು ಹಾಗೂ ಉತ್ತರ ಪ್ರದೇಶ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಮುಂಬೈ, ಹೈದರಾಬಾದ್ ಹಾಗೂ ಪುಣೆ ಗರಿಷ್ಠ ಉದ್ಯೋಗಾರ್ಹ ಪ್ರತಿಭೆಗಳನ್ನು ಹೊಂದಿರುವ ನಗರಗಳು ಎನಿಸಿಕೊಂಡಿವೆ.

ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಮಹಾರಾಷ್ಟ್ರ ಈ ಬಾರಿ ಅಗ್ರಸ್ಥಾನಕ್ಕೇರಿದ್ದರೆ, ತಮಿಳುನಾಡು 10ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಮಂಗಳವಾರ ಬಿಡುಗಡೆಯಾದ ಏಳನೇ ಆವೃತ್ತಿಯ ಅಖಿಲ ಭಾರತ ಕೌಶಲ ವರದಿ 2020ರ ಪ್ರಕಾರ ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಪಶ್ಚಿಮ ಬಂಗಾಳ ರ್ಯಾಂಕಿಂಗ್‌ನಲ್ಲಿ ಕೆಳಕ್ಕೆ ಜಾರಿದೆ. ಅಂತೆಯೇ ಹರ್ಯಾಣ ಕೂಡಾ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

ನಗರಗಳ ಪೈಕಿ ಮುಂಬೈ ಅಗ್ರಸ್ಥಾನದಲ್ಲಿದ್ದರೆ, ಮೊದಲ ಬಾರಿಗೆ ಅಗ್ರ 10ರ ಪಟ್ಟಿಯಲ್ಲಿ ಸೇರಿರುವ ಹೈದರಾಬಾದ್ 2ನೇ ಸ್ಥಾನದಲ್ಲಿದೆ. ಬೆಂಗಳೂರು, ಹೊಸದಿಲ್ಲಿ, ಪುಣೆ, ಲಕ್ನೋ ಹಾಗೂ ಚೆನ್ನೈ ತಮ್ಮ ಸ್ಥಾನಗಳನ್ನು ಕಳೆದ ಆರು ವರ್ಷಗಳಿಂದ ಅಗ್ರ 10ರ ಪಟ್ಟಿಯಲ್ಲಿ ಉಳಿಸಿಕೊಂಡಿವೆ. ಕಳೆದ ವರ್ಷ ಪಟ್ಟಿಯಲ್ಲಿದ್ದ ನಾಸಿಕ್ ಹಾಗೂ ಗುಂಟೂರು ಪಟ್ಟಿಯಿಂದ ಕಣ್ಮರೆಯಾಗಿವೆ. ಈ ಸ್ಥಾನಗಳನ್ನು ಮಂಗಳೂರು ಹಾಗೂ ಕೊಯಮತ್ತೂರು ಆಕ್ರಮಿಸಿಕೊಂಡಿವೆ. 28 ರಾಜ್ಯ ಹಾಗೂ 9 ಕೇಂದ್ರಾಡಳಿತ ಪ್ರದೇಶಗಳ 35 ಶಿಕ್ಷಣ ಸಂಸ್ಥೆಗಳ ಮೂರು ಲಕ್ಷ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News