ಕಡಿಮೆ ಅಂಕ ಗಳಿಸಿದ ದಲಿತ ಬಾಲಕಿಯ ಮುಖಕ್ಕೆ ಕಪ್ಪು ಬಳಿದ ಶಿಕ್ಷಕಿ

Update: 2019-12-10 03:57 GMT

ಹಿಸ್ಸಾರ್, ಡಿ.10: ಒಂಬತ್ತು ವರ್ಷದ ದಲಿತ ವಿದ್ಯಾರ್ಥಿನಿ ಸೇರಿದಂತೆ ಕೆಲ ಮಕ್ಕಳ ಮುಖಕ್ಕೆ ಮಸಿ ಬಳಿದು ಮೆರವಣಿಗೆ ನಡೆಸಿದ ಆರೋಪದಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಹರ್ಯಾಣದ ಹಿಸಾರ್ ನಗರದಲ್ಲಿ ಈ ಘಟನೆ ನಡೆದಿದ್ದು, ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಿನ್ನೆಲೆಯಲ್ಲಿ ಶಿಕ್ಷಕಿ, ಬಾಲಕಿಯರಿಗೆ ಈ ಶಿಕ್ಷೆ ವಿಧಿಸಿದ್ದಾರೆ.

ಕಳೆದ ಶುಕ್ರವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ಮುಖದ ಮೇಲೆ ಕಪ್ಪು ಸ್ಕೆಚ್‌ಪೆನ್‌ನಿಂದ ಗೀಚಿ ತರಗತಿಯಲ್ಲಿ ಮೆರವಣಿಗೆ ನಡೆಸಿ, ಇವರತ್ತ "ಶೇಮ್" ಎಂದು ಕೂಗುವಂತೆ ಇತರ ವಿದ್ಯಾರ್ಥಿಗಳಿಗೆ ಶಿಕ್ಷಕಿ ಸೂಚಿಸಿದ್ದರು ಎಂದು ಬಾಲಕಿಯ ತಂದೆ ದೂರಿದ್ದಾರೆ.

"ಈ ಘಟನೆ ಹಿನ್ನೆಲೆಯಲ್ಲಿ ಮಗಳು ಶನಿವಾರ ಶಾಲೆಗೆ ಹೋಗಲು ನಿರಾಕರಿಸಿದಳು. ಕಾರಣ ಕೇಳಿದಾಗ ಅಳುತ್ತಾ ಕೂತಳು. ಆಗ ಸಣ್ಣ ಮಗಳು ಇಡೀ ಘಟನೆ ವಿವರಿಸಿದಳು" ಎಂದು ಕಾರ್ಮಿಕನಾಗಿರುವ ತಂದೆ ವಿವರಿಸಿದ್ದಾರೆ. ಈ ಸಂಬಂಧ ರವಿವಾರ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆ ಬಳಿಕ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3ರ ಅನ್ವಯ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ಶಾಲೆಗೆ ಭೇಟಿ ನೀಡಿದಾಗ ಗೇಟುಗಳು ಮುಚ್ಚಿರುವುದು ಕಂಡುಬಂತು ಎಂದು ಸಬ್ಜಿಮಂಡಿ ಠಾಣೆಯ ಅಧಿಕಾರಿ ಜಗಜೀತ್ ಸಿಂಗ್ ಹೇಳಿದ್ದಾರೆ.

ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಇಡೀ ಶಾಲಾ ಕ್ಯಾಂಪಸ್‌ಗೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದ್ದು, ಆರೋಪಿ ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕಾಗಿ ಸಿಸಿಟಿವಿ ದೃಶ್ಯಾವಳಿಯ ಮೂಲಕ ಪುರಾವೆ ಸಂಗ್ರಹಿಸುವಂತೆ ಪೊಲೀಸರಿಗೆ ಕೇಳಿದ್ದಾಗಿ ತಂದೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News