ಪೌರತ್ವ ಮಸೂದೆ: ಗೃಹ ಸಚಿವ ಅಮಿತ್ ಶಾ ವಿರುದ್ಧ ನಿರ್ಬಂಧಕ್ಕೆ ಅಮೆರಿಕ ಆಯೋಗ ಆಗ್ರಹ

Update: 2019-12-19 07:55 GMT

ವಾಷಿಂಗ್ಟನ್, ಡಿ.10: ಪೌರತ್ವ (ತಿದ್ದುಪಡಿ) ಮಸೂದೆಯನ್ನು ‘ತಪ್ಪು ದಿಕ್ಕಿನಲ್ಲಿ ಅಪಾಯಕಾರಿ ತಿರುವು ’ಎಂದು ಬಣ್ಣಿಸಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರಗಳ ಕುರಿತ ಆಯೋಗ (ಯುಎಸ್‌ಸಿಐಆರ್‌ಎಫ್) ವು ‘ಧಾರ್ಮಿಕ ಮಾನದಂಡ ’ವನ್ನು ಹೊಂದಿರುವ ಈ ಮಸೂದೆಯು ಭಾರತೀಯ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡರೆ ಗೃಹಸಚಿವ ಅಮಿತ್ ಶಾ ಮತ್ತು ಇತರ ಪ್ರಮುಖ ನಾಯಕರ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಟ್ರಂಪ್ ಸರಕಾರವನ್ನು ಕೋರಿದೆ.

ಸೋಮವಾರ ಮಧ್ಯರಾತ್ರಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ಧಾರ್ಮಿಕ ಕಿರುಕುಳಗಳಿಂದಾಗಿ ಪಾಕಿಸ್ತಾನ,ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ 2014,ಡಿ.31ರವರೆಗೆ ಭಾರತಕ್ಕೆ ಬಂದಿರುವ,ಆರು ಮುಸ್ಲಿಮೇತರ ಧಾರ್ಮಿಕ ಸಮುದಾಯಗಳಿಗೆ ಸೇರಿದ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಒದಗಿಸುತ್ತದೆ.

ಮಸೂದೆಯು ನಿರ್ದಿಷ್ಟವಾಗಿ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಪೌರತ್ವವನ್ನು ನೀಡಲು ಧರ್ಮದ ಆಧಾರದಲ್ಲಿ ಕಾನೂನು ಮಾನದಂಡವನ್ನು ನಿಗದಿಗೊಳಿಸಿದೆ ಎಂದು ಆಯೋಗವು ಸೋಮವಾರ ಹೇಳಿಕೆಯೊಂದರಲ್ಲಿ ಆರೋಪಿಸಿದೆ.

ಅಸ್ಸಾಮಿನಲ್ಲಿ ನಡೆಯುತ್ತಿರುವ ಎನ್‌ಆರ್‌ಸಿ ಪ್ರಕ್ರಿಯೆ ಮತ್ತು ದೇಶವ್ಯಾಪಿ ಎನ್‌ಆರ್‌ಸಿಯನ್ನು ನಡೆಸುವ ಶಾ ಅವರ ಪ್ರಸ್ತಾವವನ್ನು ಬೆಟ್ಟು ಮಾಡಿರುವ ಆಯೋಗವು,ಭಾರತ ಸರಕಾರವು ಭಾರತೀಯ ಪೌರತ್ವಕ್ಕಾಗಿ ಧಾರ್ಮಿಕ ಪರೀಕ್ಷೆ ಯೊಂದನ್ನು ಸೃಷ್ಟಿಸುತ್ತಿದೆ ಮತ್ತು ಇದು ಮಿಲಿಯಾಂತರ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳಲಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದೆ.

ಭಾರತ ಸರಕಾರವು ಕಳೆದೊಂದು ದಶಕಕ್ಕೂ ಹೆಚ್ಚಿನ ಸಮಯದಿಂದ ಆಯೋಗದ ಹೇಳಿಕೆಗಳು ಮತ್ತು ವಾರ್ಷಿಕ ವರದಿಗಳನ್ನು ಕಡೆಗಣಿಸುತ್ತಲೇ ಬಂದಿದೆ ಎಂದೂ ಅದು ತಿಳಿಸಿದೆ.

ಹಿಂದಿನ ಯುಪಿಎ ಸರಕಾರದ ಆಡಳಿತದ ದಿನಗಳಿಂದಲೂ ಭಾರತವು ತನ್ನ ಆಂತರಿಕ ವ್ಯವಹಾರಗಳ ಕುರಿತು ಮೂರನೇ ರಾಷ್ಟ್ರದ ಅಭಿಪ್ರಾಯಗಳು ಅಥವಾ ವರದಿಗಳನ್ನು ತಾನು ಮಾನ್ಯ ಮಾಡುವುದಿಲ್ಲ ಎಂದು ನಿರಂತರವಾಗಿ ಹೇಳುತ್ತಲೇ ಬಂದಿದೆ. ಇದೇ ಕಾರಣದಿಂದ ಅದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರದ ಬಗ್ಗೆ ಪರಿಶೀಲನೆ ನಡೆಸಲು ಯುಎಸ್‌ಸಿಐಆರ್‌ಎಫ್ ಅಧಿಕಾರಿಗಳ ಭೇಟಿಗೆ ಕಳೆದೊಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ವೀಸಾಗಳನ್ನು ನಿರಾಕರಿಸುತ್ತಿದೆ.

ಯುಎಸ್‌ಸಿಐಆರ್‌ಎಫ್‌ನ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದಿಲ್ಲ,ಆದರೆ ಅಮೆರಿಕ ಸರಕಾರವು,ವಿಶೇಷವಾಗಿ ಧಾರ್ಮಿಕ ಸ್ವಾತಂತ್ರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ವಿದೇಶಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ನಿರ್ಬಂಧಗಳನ್ನು ಹೇರುವ ಅಧಿಕಾರವನ್ನು ಹೊಂದಿರುವ ವಿದೇಶಾಂಗ ಇಲಾಖೆಯು ಈ ಶಿಫಾರಸುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.

ಪೌರತ್ವಕ್ಕಾಗಿ ಧಾರ್ಮಿಕ ಮಾನದಂಡ ಸಲ್ಲದು:ಅಮೆರಿಕ ಕಾಂಗ್ರೆಸ್‌ನ ಸಮಿತಿ

ಪೌರತ್ವಕ್ಕಾಗಿ ಧಾರ್ಮಿಕ ಮಾನದಂಡವನ್ನು ಆಧರಿಸುವುದು ದೇಶವೊಂದರ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲ ಸಿದ್ಧಾಂತಗಳನ್ನು ಕಡೆಗಣಿಸಬಹುದು ಎಂದು ಅಮೆರಿಕ ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯು ಸೋಮವಾರ ಪೌರತ್ವ (ತಿದ್ದುಪಡಿ)ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡ ಬೆನ್ನಿಗೇ ಹೇಳಿದೆ.

ಧಾರ್ಮಿಕ ವೈವಿಧ್ಯತೆಯು ಭಾರತ ಮತ್ತು ಅಮೆರಿಕದ ಬುನಾದಿಗಳ ಕೇಂದ್ರಬಿಂದುವಾಗಿದ್ದು,ನಾವು ಹಂಚಿಕೊಂಡಿರುವ ಮುಖ್ಯ ಮೌಲ್ಯಗಳಲ್ಲಿ ಒಂದಾಗಿದೆ. ಪೌರತ್ವಕ್ಕಾಗಿ ಯಾವುದೇ ಧಾರ್ಮಿಕ ಮಾನದಂಡವು ಈ ಮೂಲ ಪ್ರಜಾಪ್ರಭುತ್ವದ ಸಿದ್ಧಾಂತವನ್ನೇ ಕಡೆಗಣಿಸುತ್ತದೆ ಎಂದು ಅದು ತಿಳಿಸಿದೆ.

ಭಾರತದ ತಿರುಗೇಟು

ಪೌರತ್ವ (ತಿದ್ದುಪಡಿ) ಮಸೂದೆ ಕುರಿತು ಯುಎಸ್‌ಸಿಐಆರ್‌ಎಫ್‌ನ ಟೀಕಾತ್ಮಕ ಹೇಳಿಕೆ ಸರಿಯಲ್ಲ ಮತ್ತು ಅನಗತ್ಯವಾಗಿದೆ ಎಂದು ಭಾರತವು ತಿರುಗೇಟು ನೀಡಿದೆ.

ಯುಎಸ್‌ಸಿಐಆರ್‌ಎಫ್‌ನ ಹೇಳಿಕೆಯು ಅದಕ್ಕೆ ಯಾವುದೇ ಅಧಿಕಾರವಿಲ್ಲದ ವಿಷಯದಲ್ಲಿ ಅದರ ಪಕ್ಷಪಾತದ ನಿಲುವಿನಿಂದ ನಿರ್ದೇಶಿತವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News