ಧರ್ಮದ ಆಧಾರದಲ್ಲಿ ಕೆಲವರನ್ನು ಹೊರಗಿಡುವುದು ಸಾಂವಿಧಾನಿಕ ತತ್ವಕ್ಕೆ ಅನುಗುಣವಾಗದು: ಮಾಜಿ ಸಿಜೆಐ ಲೋಧಾ

Update: 2019-12-19 07:53 GMT

ಹೊಸದಿಲ್ಲಿ, ಡಿ.10: ಧರ್ಮದ ಆಧಾರದಲ್ಲಿ ಕೆಲವರನ್ನು ಹೊರಗಿಡುವುದು ಭಾರತದ ಸಾಂವಿಧಾನಿಕ ನಿಬಂಧನೆಗಳ ತತ್ವಕ್ಕೆ ಅನುಗುಣವಾಗದು ಎಂದು ಲೋಕಸಭೆಯಲ್ಲಿ ಬಹಳಷ್ಟು ಚರ್ಚೆಯ ಬಳಿಕ ಅನುಮೋದನೆ ಪಡೆದ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತಂತೆ ಸುಪ್ರೀಂ ಕೋರ್ಟಿ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಆರ್.ಎಂ.ಲೋಧಾ ಅಭಿಪ್ರಾಯಪಟ್ಟಿದ್ದಾರೆ.

ಈ ಕಾನೂನು ಅಂತಿಮವಾಗಿ ಯಾವ ರೂಪ ಪಡೆಯಲಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲವಾದುದರಿಂದ ಈಗಲೇ ಅದರ ಬಗ್ಗೆ ಏನಾದರೂ ಪ್ರತಿಕ್ರಿಯಿಸುವುದು ಸಾಧ್ಯವಿಲ್ಲ ಎಂದು ದಿ ಹಿಂದುಸ್ತಾನ್ ಟೈಮ್ಸ್ ಜತೆಗಿನ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನೂ ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿ ಸಾಯಿಸಿದ್ದನ್ನು ಅಲ್ಲಿನ ಜನರು ಸಂಭ್ರಮಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜಸ್ಟಿಸ್ ಲೋಧಾ, ಇದು ಆಘಾತಕಾರಿ ಎಂದರು. ‘‘ಜನರು ಕಾನೂನಿನ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆಂದು ಅನಿಸುತ್ತದೆ. ಇದು ಗುಂಪು ಮನೋವೃತ್ತಿ. ನ್ಯಾಯಯುತ ವಿಚಾರಣೆಯಲ್ಲಿ ನಾವು ವಿಶ್ವಾಸ ಕಳೆದುಕೊಂಡಿದ್ದೇವೆಂದು ಅನಿಸುತ್ತದೆ. ಇದು ನಿಜವಾಗಿಯೂ ದುರಾದೃಷ್ಟಕರ’’ ಎಂದರು.

ಕೆಲ ಸಚಿವರೂ ತೆಲಂಗಾಣ ಪೊಲೀಸರ ಕ್ರಮವನ್ನು ಶ್ಲಾಘಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ‘‘ನಾವು ಈ ನೆಲದ ಕಾನೂನನ್ನು ನಾಶಪಡಿಸುತ್ತಿದ್ದೇವೆ ಹಾಗೂ ಕೆಟ್ಟ ಕಾಲದತ್ತ ಸಾಗುತ್ತಿದ್ದೇವೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News