ಇಂದು ವರ್ಲ್ಡ್ ಟೂರ್ ಫೈನಲ್ಸ್‌ ಬ್ಯಾಡ್ಮಿಂಟನ್ ಟೂರ್ನಿ ಆರಂಭ

Update: 2019-12-10 18:31 GMT

ಗ್ವಾಂಗ್‌ಝೌ, ಡಿ.10: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ ಬಳಿಕ ಕಳಪೆ ಫಾರ್ಮ್‌ನಲ್ಲಿರುವ ಭಾರತೀಯ ಶಟ್ಲರ್ ಪಿ.ವಿ.ಸಿಂಧು ಬುಧವಾರ ಇಲ್ಲಿ ಆರಂಭವಾಗಲಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಆಡುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಲಿದ್ದಾರೆ.

ಆಗಸ್ಟ್‌ನಲ್ಲಿ ಸ್ವಿಟ್ಝೆರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿ ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿ ಜೀವನಶ್ರೇಷ್ಠ ಸಾಧನೆ ಮಾಡಿದ್ದ ಸಿಂಧು ಆ ನಂತರ ಕಳಪೆ ಫಾರ್ಮ್‌ನಲ್ಲಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿರುವ ಸಿಂಧು ಜುಲೈನಲ್ಲಿ ಇಂಡೋನೇಶ್ಯ ಓಪನ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು. ಕೊರಿಯಾ ಓಪನ್ ಹಾಗೂ ಫುಝೌ ಚೀನಾ ಓಪನ್‌ನ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಚೀನಾ ಓಪನ್ ಸೂಪರ್ 1000, ಡೆನ್ಮಾರ್ಕ್ ಓಪನ್ ಸೂಪರ್ 750 ಹಾಗೂ ಹಾಂಕಾಂಗ್ ಓಪನ್ ಸೂಪರ್ 500 ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತು ಹೊರ ನಡೆದಿದ್ದರು.

7,50,000 ಯುಎಸ್ ಡಾಲರ್ ಬಹುಮಾನ ಮೊತ್ತದ ಫ್ರೆಂಚ್ ಓಪನ್‌ನಲ್ಲಿ ಮಾತ್ರ ಕ್ವಾರ್ಟರ್ ಫೈನಲ್ ತಲುಪಿದ್ದರು.

ವಿಶ್ವದ ಅಗ್ರ-8 ಆಟಗಾರ್ತಿಯರು ಮಾತ್ರ ವರ್ಷಾಂತ್ಯದಲ್ಲಿ ನಡೆಯುವ ವರ್ಲ್ಡ್ ಟೂರ್ ಫೈನಲ್ಸ್ ಗೆ ಅರ್ಹತೆ ಪಡೆದಿದ್ದಾರೆ. ಸಿಂಧು 15ನೇ ರ್ಯಾಂಕಿನೊಂದಿಗೆ ಈ ವರ್ಷವನ್ನು ಅಂತ್ಯಗೊಳಿಸಿದ್ದರೂ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಕಾರಣಕ್ಕೆ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ.

 ಪ್ರಸ್ತುತ ಕಳಪೆ ಫಾರ್ಮ್‌ನಲ್ಲಿರುವ ಹೊರತಾಗಿಯೂ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಸಿಂಧು ಮೇಲೆ ಎಲ್ಲರ ಚಿತ್ತವಿದೆ. ಹಾಂಕಾಂಗ್ ಓಪನ್ ಬಳಿಕ ವಿಶ್ರಾಂತಿ ಪಡೆದು ವರ್ಲ್ಡ್ ಫೈನಲ್ಸ್‌ಗೆ ಸಜ್ಜಾಗಿದ್ದ ಸಿಂಧು 2017 ಹಾಗೂ 2018ರಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದರು.

ಈ ಬಾರಿ ಸಿಂಧು ‘ಎ’ ಗುಂಪಿನಲ್ಲಿ ಚೀನಾದ ಚೆನ್ ಯು ಫೀ ಹಾಗೂ ಹೀ ಬಿಂಗ್ ಜಿಯಾವೊ,ಜಪಾನ್‌ನ ಅಕಾನೆ ಯಮಗುಚಿ ಅವರೊಂದಿಗೆ ಸ್ಥಾನ ಪಡೆದಿದ್ದಾರೆ. ‘ಬಿ’ ಗುಂಪಿನಲ್ಲಿ ನಾಲ್ವರು ಶಟ್ಲರ್‌ಗಳಾದ ತೈವಾನ್‌ನ ತೈ ಝು ಯಿಂಗ್, ಥಾಯ್ಲೆಂಡ್‌ನ ರಚನೊಕ್ ಇಂತನಾನ್ ಹಾಗೂ ಬುಸನನ್ ಒಂಗ್ಬಮ್ರುಂಗಫನ್ ಹಾಗೂ ಜಪಾನ್‌ನ ನರೊಮಿ ಒಕುಹರಾ ಅವರಿದ್ದಾರೆ.

ಸಿಂಧು ಜಪಾನ್ ಯಮಗುಚಿ ಅವರನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಯಮಗುಚಿ ಗಾಯದ ಸಮಸ್ಯೆಗೆ ಒಳಗಾಗಿ ನಾಲ್ಕು ಬಾರಿ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸುವ ಮೊದಲು ಎರಡು ಬಾರಿ ಇಂಡೊನೇಶ್ಯ ಹಾಗೂ ಜಪಾನ್ ಓಪನ್ ಪ್ರಶಸ್ತಿ ಜಯಿಸಿದ್ದರು. ಸಿಂಧು ಪ್ರಸ್ತುತ ಯಮಗುಚಿ ವಿರುದ್ಧ 10-6 ಹೆಡ್-ಟು-ಹೆಡ್ ದಾಖಲೆ ಕಾಯ್ದುಕೊಂಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಜಪಾನ್ ಆಟಗಾರ್ತಿಗೆ ಸೋತಿದ್ದಾರೆ.

ಚೆನ್ ಯು ಫೀ ವಿರುದ್ಧವೂ ಸಿಂಧು 6-3 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಸದ್ಯಕ್ಕೆ ಚೀನಾದ ಆಟಗಾರ್ತಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಸಹಿತ ಆರು ಬಾರಿ ಫೈನಲ್ ಪಂದ್ಯವನ್ನು ಜಯಿಸಿದ್ದಾರೆ.

ಸಿಂಧು ಚೀನಾದ ಇನ್ನೋರ್ವ ಆಟಗಾರ್ತಿ ಹೀ ಬಿಂಗ್ ಜಿಯಾವೊ ವಿರುದ್ಧ 9 ಬಾರಿ ಸೋತಿದ್ದಾರೆ. ಇದರಲ್ಲಿ ಕಳೆದ 4 ಪಂದ್ಯಗಳು ಸೇರಿವೆ. ಚೀನಾ ಆಟಗಾರ್ತಿ ಕೊರಿಯಾ ಓಪನ್‌ನಲ್ಲಿ ಜಯಶಾಲಿಯಾಗಿದ್ದಲ್ಲದೆ, ಇಂಡಿಯಾ ಓಪನ್ ಹಾಗೂ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ಸ್-ಅಪ್ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News