ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ಬಾಹಿರ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

Update: 2019-12-19 05:31 GMT

ಬೆಂಗಳೂರು, ಡಿ.11: ಸಂವಿಧಾನ ಬಾಹಿರವಾಗಿ, ಜಾತಿ-ಧರ್ಮದ ಹೆಸರಲ್ಲಿ ದೇಶದ ಜನರನ್ನು ವಿಭಜಿಸುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸರಕಾರ ಇಂತಹ ಅಮಾನವೀಯ, ಕಾನೂನು ಬಾಹಿರ, ಅನೈತಿಕ ಕಾಯಿದೆ ಜಾರಿ ಮಾಡುವ ಮೂಲಕ ದೇಶಕ್ಕೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದೆ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರುತ್ತಿದೆ. ಈ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ತಿದ್ದುಪಡಿ ಮಸೂದೆ ತರಲಾಗುತ್ತಿದೆ. ಸಂವಿಧಾನ ವಿರೋಧಿ ಮಸೂದೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಅಲ್ಲದೇ ಈ ಮಸೂದೆಗೆ ಅನುಮೋದನೆ ನೀಡದಂತೆ ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗೂ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.

ದೇಶವನ್ನು ವಿಭಜಿಸಿದ್ದು ಮುಹಮ್ಮದ್ ಅಲಿ ಜಿನ್ನಾ ಹಾಗೂ ವೀರ್ ಸಾವರ್ಕರ್. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮುಸ್ಲಿಮರಲ್ಲೇ ಶಿಯಾ ಹಾಗೂ ಸುನ್ನಿ ಎಂಬ ಎರಡು ಪಂಗಡಗಳಿವೆ. ಅವರು ಜಮ್ಮು ಕಾಶ್ಮೀರದಲ್ಲಿ ಬಂದು ನೆಲೆಸಿದ್ದಾರೆ. ಬಾಂಗ್ಲಾದೇಶದಿಂದ ರೋಹಿಂಗ್ಯಾ ಹಿಂದುಗಳು ಬಂದು ಅಸ್ಸಾಂನಲ್ಲಿ ನೆಲೆಸಿದ್ದಾರೆ ಎಂದು ಅವರು ಹೇಳಿದರು.

ಶ್ರೀಲಂಕಾದ ಕ್ರಿಶ್ಚಿಯನ್ನರು ತಮಿಳುನಾಡಿನಲ್ಲಿದ್ದಾರೆ. ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯಲಿದೆ. ಮುಸ್ಲಿಮರನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇವರನ್ನೆಲ್ಲ ಒಕ್ಕಲೆಬ್ಬಿಸಿದರೆ ಅವರು ಎಲ್ಲಿಗೆ ಹೋಗಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹಿಟ್ಲರ್‌ನ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ಕಿಡಿಗಾರಿದರು.

1955ರಲ್ಲಿ ಪೌರತ್ವ ಮಸೂದೆಯನ್ನು ಆಗಿನ ಸರಕಾರ ರಚಿಸಿತ್ತು. ಈಗಾಗಲೇ ಐದು ಬಾರಿ ಈ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ಆದರೆ, ಸ್ವಾತಂತ್ರ ನಂತರ ಇದೇ ಮೊದಲ ಬಾರಿ ಧರ್ಮದ ಆಧಾರದಲ್ಲಿ ವಿಭಜನೆ ಮಾಡುವಂತಹ ತಿದ್ದುಪಡಿ ತರಗುತ್ತಿದೆ. ಇದನ್ನು ಯಾರು ಒಪ್ಪುವುದಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News