ಬಾಬರಿ ಮಸೀದಿ ತೀರ್ಪು: ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಪಿಎಫ್ಐ

Update: 2019-12-12 06:15 GMT

ಹೊಸದಲ್ಲಿ: ಬಾಬರಿ ಮಸೀದಿ ಹಕ್ಕುಸ್ವಾಮ್ಯದ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉತ್ತರ ವಲಯ ಕಾರ್ಯದರ್ಶಿ ಅನಿಸ್ ಅನ್ಸಾರಿ ಅವರು 2019ರ ಡಿಸೆಂಬರ್ 9ರಂದು ಸುಪ್ರೀಂ ಕೋರ್ಟ್‍ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. 

ನವೆಂಬರ್ 15 ಮತ್ತು 16ರಂದು ನಡೆದ ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ದೃಢವಾದ ಐತಿಹಾಸಿಕ ಸಂಗತಿಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್‍ನಿಂದ ನ್ಯಾಯವನ್ನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಬಾಬರಿ ಮಸೀದಿಯನ್ನು ಎರಡು ಬಾರಿ ಧ್ವಂಸಗೊಳಿಸಲಾಗಿದೆ. ಮೊದಲು, 1949ರಲ್ಲಿ ವಿಗ್ರಹವನ್ನು ಮಸೀದಿಯ ಕೇಂದ್ರ ಗುಮ್ಮಟದ ಅಡಿಯಲ್ಲಿ ಇರಿಸಿ ವಿವಾದ ಸೃಷ್ಟಿಸಲಾಯಿತು ಮತ್ತು ಎರಡನೆ ಬಾರಿ 1992ರಲ್ಲಿ ಗೂಂಡಾಗಳ ಗುಂಪೊಂದು ಮಸೀದಿಯನ್ನು ನೆಲಸಮಗೊಳಿಸಿತು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿಯೇ ಹೇಳಿದೆ. ನ್ಯಾಯಾಲಯವು ಈ ಸಂಗತಿಗಳನ್ನು ಪರಿಗಣಿಸದೆ ಅತಿಕ್ರಮಣ ಮಾಡಿದ ಮತ್ತು ನಂತರ ಬಾಬರಿ ಮಸೀದಿಯನ್ನು ನೆಲಸಮ ಮಾಡಿದ ದುಷ್ಕರ್ಮಿಗಳಿಗೆ ಭೂಮಿಯನ್ನು ಹಸ್ತಾಂತರಿಸಲು ಸೂಚಿಸಿದೆ. ತೀರ್ಪಿನ ಪ್ರಮುಖ ಅಂಶಗಳು, ನ್ಯಾಯಾಲಯವು ಗಮನಿಸಿದ ಮತ್ತು ಎತ್ತಿಹಿಡಿದ ಅಂಶಗಳಿಗೆ ವಿರುದ್ಧವಾಗಿವೆ. ಆದ್ದರಿಂದ ಅದು ತನ್ನ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಮಸೀದಿಯಲ್ಲಿ ವಿಗ್ರಹಗಳನ್ನು ಇಟ್ಟಿರುವ ಮತ್ತು ಅದನ್ನು ಕೆಡವಿರುವ ದುಷ್ಕರ್ಮಿಗಳ ಕೃತ್ಯಗಳನ್ನು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕಾನೂನುಬಾಹಿರವೆಂದು ಒಪ್ಪಿಕೊಂಡಿದ್ದು, ಈ ನಿಟ್ಟಿನಲ್ಲಿ ಪರಿಹಾರವನ್ನು ಒದಗಿಸಬೇಕಿದೆ. ತೀರ್ಪು ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲಭೂತ ತತ್ವವನ್ನು ಪಾಲಿಸಿಲ್ಲ. ತೀರ್ಪನ್ನು ಪುನರ್ ಪರಿಶೀಲಿಸಲು, ತೀರ್ಪಿನ ಆದೇಶ ಜಾರಿಯನ್ನು ಸ್ಥಗಿತಗೊಳಿಸಲು ಮತ್ತು 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ ತೀರ್ಪಿಗೆ ತಡೆ ನೀಡಲು ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಆದೇಶದಂತೆ ಕೇಂದ್ರ ಸರ್ಕಾರವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ತಡೆಯಲು ಈ ಅರ್ಜಿಯ ಮುಕ್ತ ನ್ಯಾಯಾಲಯದ ವಿಚಾರಣೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News