ತೆಲಂಗಾಣ ಎನ್‌ಕೌಂಟರ್ ಪ್ರಕರಣ:ತನಿಖಾ ಆಯೋಗ ರಚಿಸಿದ ಸುಪ್ರೀಂಕೋರ್ಟ್

Update: 2019-12-12 07:40 GMT

ಹೊಸದಿಲ್ಲಿ, ಡಿ.12: ಹೈದರಾಬಾದ್‌ನ 26ರ ವಯಸ್ಸಿನ ಪಶು ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಹತ್ಯೆಗೈದ ನಾಲ್ವರು ಆರೋಪಿಗಳ ಎನ್‌ಕೌಂಟರ್‌ಗೆ ಸಂಬಂಧಿಸಿ ತನಿಖೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ತನಿಖಾ ಆಯೋಗವನ್ನು ರಚಿಸಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ವಿಎಸ್ ಸಿರ್ಪುರ್ಕರ್ ಮೂವರು ಸದಸ್ಯರ ತನಿಖಾ ಸಮಿತಿಯ ನೇತೃತ್ವವಹಿಸಲಿದ್ದು, ಸಮಿತಿಯು ಆರು ತಿಂಗಳೊಳಗೆ ತನ್ನ ತನಿಖೆ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ.

ತೆಲಂಗಾಣ ಎನ್‌ಕೌಂಟರ್ ಪ್ರಕರಣವನ್ನು ಪ್ರಶ್ನಿಸಿ ಇಬ್ಬರು ವಕೀಲರು ಸಲ್ಲಸಿದ್ದ ಅರ್ಜಿಯನ್ನು ಮುಖ್ಯನ್ಯಾಯಾಧೀಶ ಎಸ್‌ಎ ಬೋಬ್ಡೆ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.

ತನ್ನ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ವಿಚಾರಣೆ ನಡೆಸುವುದಕ್ಕೆ ತೆಲಂಗಾಣ ಸರಕಾರದ ಆಕ್ಷೇಪವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ‘‘ಪರಸ್ಪರ ವಿರೋಧಿ ಆವೃತ್ತಿಗಳು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿವೆ’’ ಎಂದು ಹೇಳಿದೆ.

ತೆಲಂಗಾಣ ಸರಕಾರದ ಪರ ವಾದಿಸಿದ ವಕೀಲ ಮುಕುಲ್ ರೋಹ್ಟಗಿ,‘‘ಸಿಸಿಟಿವಿ ಕ್ಯಾಮರಾಗಳ ಮೂಲಕ ನಾಲ್ವರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ. ಓರ್ವ ಬೈಕ್ ಓಡಿಸುತ್ತಿದ್ದ. ಮತ್ತೊಮ್ಮೆ ಮಹಿಳೆಗೆ ಬೆಂಕಿ ಹಚ್ಚಿ ಸುಡಲು ಪೆಟ್ರೋಲ್ ತರುತ್ತಿದ್ದ. ಜನತೆ ಅತ್ಯಾಚಾರಿಗಳ ಮೇಲೆ ತೀವ್ರ ಆಕ್ರೋಶಗೊಂಡಿದ್ದ ಕಾರಣ ಅರೋಪಿಗಳನ್ನು ಬೆಳಗ್ಗಿನ ಜಾವ ಜೈಲಿನಿಂದ ಹೊರಗೆ ಕರೆದೊಯ್ಯಲಾಗಿತ್ತು. ಆಗ ಅವರು ಪೊಲೀಸರ ಕೈಯ್ಯಲ್ಲಿದ್ದ ರಿವಾಲ್ವರ್ ಕಸಿದು ಪೊಲೀಸರ ಮೇಲೆ ಗುಂಡು ಹಾರಿಸಿ ದಾಳಿಗೆ ಯತ್ನಿಸಿದ್ದರು. ಪೊಲೀಸರಿಗೆ ಇದರಿಂದ ಗಾಯವಾಗಿದೆ. ಸ್ವರಕ್ಷಣೆಗಾಗಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದರು.

 ತೆಲಂಗಾಣ ಸರಕಾರದ ವಾದಕ್ಕೆ ತೃಪ್ತಗೊಳ್ಳದ ಸುಪ್ರೀಂಕೋರ್ಟ್, ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಪ್ರಕರಣದಲ್ಲಿ ಪೊಲೀಸರ ನಡೆ ಅನುಮಾನಾಸ್ಪದವಾಗಿದೆ. ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸರ ಹಾಗೂ ಅತ್ಯಾಚಾರಿಗಳ ವೈದ್ಯಕೀಯ ವರದಿ, ಹಾಗೂ ಗುಂಡುಗಳ ವಿಧಿವಿಜ್ಞಾನ ವರದಿಯನ್ನು ಸಲ್ಲಿಸುವಂತೆ ತೆಲಂಗಾಣ ಸರಕಾರಕ್ಕೆ ತಿಳಿಸಿತು.

ಎನ್‌ಕೌಂಟರ್ ಬಗ್ಗೆ ತನಿಖೆಯ ಅಗತ್ಯವಿದೆ. ಜನರು ಸತ್ಯವನ್ನು ತಿಳಿದುಕೊಳ್ಳಬೇಕು. ನಾವು ಕೂಡಲೇ ಘಟನೆಯ ವಿಚಾರಣೆಗೆ ಆದೇಶಿಸುತ್ತೇವೆ.ವಿಚಾರಣೆಯನ್ನು ವಿರೋಧಿಸಬೇಡಿ ಎಂದು ರಾಜ್ಯಸರಕಾರಕ್ಕೆ ನ್ಯಾಯಾಲಯ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News