ಭಟ್ಕಳ: ನಿಂತಿದ್ದ ಲಾರಿಗೆ ಬಸ್ ಢಿಕ್ಕಿ; 25ಕ್ಕೂ ಅಧಿಕ ಮಂದಿಗೆ ಗಾಯ

Update: 2019-12-12 10:55 GMT

ಭಟ್ಕಳ: ವೇಗವಾಗಿ ಚಲಿಸುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡ ಪರಿಣಾಮ ರಸ್ತೆ ಬದಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದು 25ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯರಾತ್ರಿ ವೆಂಕಟಾಪುರ ಸೇತುವೆ ರಾ.ಹೆ.66 ರಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಕುಂದಾಪುರಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಳಗಾವಿಗೆ ತೆರಳುತ್ತಿದ್ದ ಲಾರಿಯ ಟೈರ್ ಪಂಚರ್ ಆದ ಪರಿಣಾಮ ವೆಂಕಟಾಪುರ ಸೇತುವೆಯ ರಸ್ತೆ ಬದಿಯಲ್ಲಿ ನಿಂತುಕೊಂಡಿತ್ತು ಎನ್ನಲಾಗಿದ್ದು, ಈ ಲಾರಿಯ ಹಿಂದೆಯೆ ಮತ್ತೊಂದು ಲಾರಿಯನ್ನು ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಕೊಲ್ಲೂರು ಮಂದಿರವನ್ನು ದರ್ಶಿಸಿ ಗೋಕರ್ಣಕ್ಕೆ ಹೋಗುತ್ತಿದ್ದ  ತಮಿಳುನಾಡಿನ ಖಾಸಗಿ ಪ್ರವಾಸಿ ಬಸ್ಸೊಂದು ಅತ್ಯಂತ ವೇಗವಾಗಿ ಚಲಿಸಿ ನಿಯಂತ್ರಣ ಕಳೆದುಕೊಂಡು ಹಿಂಬದಿಯಿಂದ ಲಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬಸ್ಸಿನಲ್ಲಿದ್ದ 25ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಅಪಘಾತದ ನಂತರ ಸ್ಥಳಿಯರು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಅಗತ್ಯ ಸಹಕಾರವನ್ನು ನೀಡಿದ್ದು ವಿವಿಧ ಅಂಬುಲನ್ಸ್ ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. 

ರಾ.ಹೆ.66 ಕಾಮಗಾರಿ ಅತ್ಯಂತ ನಿಧಾನಗತಿಯಿಂದ ಸಾಗಿದ್ದು ಅಪೂರ್ಣಗೊಂಡ ಹೆದ್ದಾರಿಯಲ್ಲಿ ವಾಹನಗಳು ಯಾವ ರಸ್ತೆಯಲ್ಲಿ ಹೋಗಬೇಕು ಎನ್ನುವ ಗೊಂದಲಗಳಿಂದಾಗಿ ರಸ್ತೆ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ. ಆದಷ್ಟು ಬೇಗನೆ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ಏಕಮುಖ ಸಂಚಾರದ ರಸ್ತೆಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳಿಯರು ಹೆದ್ದಾರಿ ಪ್ರಾಧಿಕಾರಕ್ಕೆ ಆಗ್ರಹಿಸಿದ್ದಾರೆ. 
ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News