ಧರ್ಮದ ಆಧಾರದದಲ್ಲಿ ದೇಶದ ಜನತೆಯನ್ನು ಒಡೆಯುವುದು ಸಲ್ಲ: ಶಾಸಕ ಶಿವಲಿಂಗೇಗೌಡ

Update: 2019-12-19 05:30 GMT

ಬೆಂಗಳೂರು, ಡಿ.12: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಮಸೂದೆಯನ್ನು ಜೆಡಿಎಸ್ ವಿರೋಧಿಸುತ್ತದೆ. ಧರ್ಮದ ಆಧಾರದ ಮೇಲೆ ದೇಶದ ಜನತೆಯನ್ನು ಒಡೆಯುವುದು ಸರಿಯಲ್ಲವೆಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಬೇಕಾದರೆ ಕಳಿಸಲಿ. ಆದರೆ, ಇಲ್ಲಿಯೇ ಬಂದು ನೆಲೆಸಿರುವವರಿಗೆ ದಾಖಲೆಗಳ ನೆಪದಲ್ಲಿ ಅನಗತ್ಯ ಕಿರುಕುಳ ನೀಡುವಂತಹ ಪೌರತ್ವ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲವೆಂದು ತಿಳಿಸಿದರು. ರಾಜ್ಯ ಬಿಜೆಪಿ ಉಪಚುನಾವಣೆಯಲ್ಲಿ ಹೇಗೆ ಗೆದ್ದಿದೆ, ಅದಕ್ಕಾಗಿ ಏನೆಲ್ಲ ಮಾಡಿತು ಎಂಬುದನ್ನು ಈಗ ಹೇಳುವ ಅಗತ್ಯವಿಲ್ಲ. ಸಂದರ್ಭಗಳು ಬಂದಾಗ ತಾನಾಗಿಯೇ ರಾಜ್ಯದ ಜನತೆಗೆ ತಿಳಿಯಲಿದೆ. ಆಸೆ, ಆಮಿಷ, ಒತ್ತಡ, ಬೆದರಿಕೆಗಳಿಂದ ತುಂಬಾ ದಿನಗಳು ಅಧಿಕಾರದಲ್ಲಿರಲು ಸಾಧ್ಯವಿಲ್ಲವೆಂದು ಅವರು ಹೇಳಿದರು.

ಮತದಾರರು ಉಪಚುನಾವಣೆಯಲ್ಲಿ ಯಡಿಯೂರಪ್ಪರನ್ನು ಬೆಂಬಲಿಸಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಷ್ಟೆ. ಆದರೆ, ಜೆಡಿಎಸ್ ತನ್ನ ನೆಲೆಯನ್ನು ಎಲ್ಲಿಯೂ ಕಳೆದುಕೊಂಡಿಲ್ಲ. ಕೆ.ಆರ್.ಪೇಟೆಯಲ್ಲಿಯೂ ನಮಗೆ ಇರುವ ಸ್ಥಾನ ಇದ್ದೇ ಇದೆ. ಇವಿಎಂ ದುರುಪಯೋಗದ ಬಗ್ಗೆ ನಮಗೆ ಸಂದೇಹವಿಲ್ಲ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯರವರ ರಾಜಕೀಯ ಸೇವೆ ರಾಜ್ಯಕ್ಕೆ ಬೇಕಿದೆ. ಅವರು ಶೀಘ್ರ ಗುಣಮುಖರಾಗಿ ಸಕ್ರಿಯವಾಗಿ ತೊಡಗಿಕೊಳ್ಳಲಿ. ರಾಜ್ಯದ ಅಭಿವೃದ್ಧಿಯಲ್ಲಿ ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ.

-ಶಿವಲಿಂಗೇಗೌಡ, ಜೆಡಿಎಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News