ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದಾಗ ಮಸೀದಿಗಳಿಗೆ ಕಲ್ಲು ತೂರಾಟ; ಆರೋಪ

Update: 2019-12-12 16:23 GMT

ಚಿಕ್ಕಮಗಳೂರು, ಡಿ.12: ದತ್ತಜಯಂತಿ ಹಿನ್ನೆಲೆಯಲ್ಲಿ ಬಾಬಾಬುಡನ್‍ ಗಿರಿಗೆ ಆಗಮಿಸಿದ್ದ ಮಾಲಾಧಾರಿ ವೇಷದಲ್ಲಿದ್ದ ಕೆಲ ಕಿಡಿಗೇಡಿಗಳು ದತ್ತಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಎರಡು ಮಸೀದಿಗಳಿಗೆ ಕಲ್ಲೆಸೆದು, ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದಿದ್ದಾರೆನ್ನಲಾದ ಘಟನೆ ಗುರುವಾರ ಸಂಜೆ ವೇಳೆ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ವರದಿಯಾಗಿದೆ.

ಮೂಡಿಗೆರೆ ತಾಲೂಕು ವ್ಯಾಪ್ತಿಯ ಭೂತನಕಾಡು ಹಾಗೂ ಗುಲ್ಲನ್‍ಪೇಟೆ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲೇ ಇರುವ 2 ಮಸೀದಿಗಳಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರಿಗೂ ಕಲ್ಲೆಸೆದು ಕಾರಿನ ಗಾಜನ್ನು ಪುಡಿ ಮಾಡಿ ಪರಾರಿಯಾಗಿದ್ದಾರೆ ತಿಳಿದು ಬಂದಿದೆ. ಗುಲ್ಲನ್ ಪೇಟೆಯ ಬಳಿ ಹೊಟೇಲ್ ಒಂದಕ್ಕೂ ಕಲ್ಲೆಸೆದಿದ್ದಾರೆ ಎನ್ನಲಾಗಿದ್ದು, ಕಾರಿಗೆ ಕೇಸರಿ ಶಾಲು ಸುತ್ತಿ ಕಲ್ಲೆಸಿದಿರುವುದು ಕಂಡುಬಂದಿದೆ. ಪಿಕಪ್ ವಾಹನವೊಂದರಲ್ಲಿ ದತ್ತಮಾಲೆ ಧರಿಸಿದ್ದ ಕಿಡಿಗೇಡಿ ಯುವಕರ ಗುಂಪು ರಸ್ತೆಯುದ್ದಕ್ಕೂ ನಿರ್ದಿಷ್ಟ ಸಮುದಾಯವೊಂದರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಅವಹೇಳನಕಾರಿ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದರೆಂದು ಆರೋಪಿಸಲಾಗಿದೆ.

ಪಿಕಪ್ ವಾಹನ ಬಾಬಾ ಬುಡನ್‍ಗಿರಿಯಿಂದ ಚಿಕ್ಕಮಗಳೂರು ನಗರಕ್ಕೆ ಬಂದು ಅಲ್ಲಿಂದ ಆಲ್ದೂರು ಮಾರ್ಗವಾಗಿ ಗುಲ್ಲನ್‍ ಪೇಟೆ, ಭೂತನಕಾಡು ಮಾರ್ಗವಾಗಿ ಹಾದು ಹೋಗಿದೆ. ವಾಹನವು ಗ್ರಾಮಗಳಲ್ಲಿ ಹಾದು ಹೋಗುತ್ತಿದ್ದ ವೇಳೆ ವಾಹನದಲ್ಲಿ ಮೊದಲೇ ಇರಿಸಿಕೊಂಡಿದ್ದ ಕಲ್ಲನ್ನು ಕಿಡಿಗೇಡಿಗಳು ಮಸೀದಿಗಳಿಗೆ ಹಾಗೂ ಕಾರಿನತ್ತ ಎಸೆದು ಪರಾರಿಯಾಗಿದ್ದಾರೆ ತಿಳಿದು ಬಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ. ಪಿಕ್‍ಅಪ್ ವಾಹನವು ಚಿಕ್ಕಮಗಳೂರು ಜಿಲ್ಲೆಯ ನೋಂದಣಿ ಸಂಖ್ಯೆ ಹೊಂದಿತ್ತು ಎಂದು ಸ್ಥಳೀಯರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಭೂತನಕಾಡು, ಗುಲ್ಲನ್‍ ಪೇಟೆ ಮಸೀದಿಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ದತ್ತಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದ ದತ್ತಮಾಲಾಧಾರಿಗಳೇ ಈ ಕೃತ್ಯ ಎಸಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ದತ್ತಜಯಂತಿ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ದತ್ತಮಾಲಾಧಾರಿಗಳು ಆಗಮಿಸಿದ್ದರು. ಬೆಳಗ್ಗೆಯಿಂದ ಸಂಜೆವರೆಗೂ ಬಾಬಾಬುಡನ್‍ಗಿರಿ ದರ್ಗಾದ ಆವರಣದಲ್ಲಿ ಜಿಲ್ಲಾಡಳಿತ ದತ್ತಪಾದುಕೆಗಳ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿತ್ತು. ಮಾಲಾಧಾರಿಗಳು ಸರತಿ ಸಾಲಿನಲ್ಲಿ ಪಾದುಕೆಗಳ ದರ್ಶನಕ್ಕೆ ಹೋಗುತ್ತಿದ್ದರು. ಈ ವೇಳೆ ಕೆಲ ಮಾಲಾಧಾರಿ ಯುವಕರ ಗುಂಪು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಪೊಲೀಸರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಎಸ್ಪಿ ಎದುರಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಘೋಷಣೆಗಳನ್ನು ಕೂಗುತ್ತಿದ್ದರು ಹಾಗೂ ದರ್ಗಾದ ಆವರಣದಲ್ಲಿದ್ದ ಪೊಲೀಸರಿಗೂ ಅವಹೇಳನಕಾರಿಯಾಗಿ ನಿಂದಿಸುತ್ತಿದ್ದರು. ಆದರೆ ಈ ಬಗ್ಗೆ ಯಾರೂ ಕೂಡಾ ಆಕ್ಷೇಪವೆತ್ತಲಿಲ್ಲ ಎಂದು ಆರೋಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News