ವಲಸೆ ಮಕ್ಕಳ ಶಿಕ್ಷಣಕ್ಕಾಗಿ ಹೊಸ ನೀತಿ ಜಾರಿಗೆ ರಾಜ್ಯ ಸರಕಾರ ಚಿಂತನೆ !

Update: 2019-12-12 16:34 GMT

ಬೆಂಗಳೂರು, ಡಿ.12: ಶಾಲೆಯಿಂದ ಹೊರಗುಳಿದ ವಲಸೆ ಹಾಗೂ ಕೂಲಿಕಾರರ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರಕಾರ ಹೊಸ ನೀತಿ ಅನುಷ್ಠಾನಗೊಳಿಸಲು ಮುಂದಾಗಿದೆ.

ಶಿಕ್ಷಣ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಕಡಿಮೆ ಮಾಡಲಾಗುತ್ತಿಲ್ಲ. ಈ ಕಾರಣದಿಂದ ‘ವಲಸೆ ಮಕ್ಕಳು ಮತ್ತು ವಲಸೆ ಕೂಲಿಕಾರರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2019’ ಅನ್ನು ಜಾರಿಗೆ ನಿರ್ಧರಿಸಲಾಗಿದೆ.

ವಲಸೆ ಮಕ್ಕಳು ಹಾಗೂ ವಲಸೆ ಕೂಲಿಕಾರರ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ದೂರ ಉಳಿಯುತ್ತಿರುವುದರಿಂದ ಶಿಕ್ಷಣ ಸಾರ್ವತ್ರೀಕರಣ ಪ್ರಕ್ರಿಯೆಯಲ್ಲಿ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ವಲಸೆ ಕೂಲಿಕಾರರ ಮಕ್ಕಳ ಶಿಕ್ಷಣ ಹಕ್ಕನ್ನು ಕಾಪಾಡಲು ಕಾಯ್ದೆ ರೂಪಿಸಿದೆ. ಈ ನೀತಿಯ ಅಂಶಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಸಹ ಚಿಂತನೆ ನಡೆಸಲಾಗಿದೆ.

ಹೈಕೋರ್ಟ್ ನಿರ್ದೇಶನದ ಮೇರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಮೇಲ್ವಿಚಾರಣಾ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ದೊರಕಿಸುವ ಪ್ರಗತಿ ಪರಿಶೀಲಿಸಬೇಕು. ಆಗಿಂದಾಗ್ಗೆ ವಲಸೆ ಮಕ್ಕಳ ಶಿಕ್ಷಣ ಕುರಿತು ಸರಕಾರಕ್ಕೆ ವರದಿ ಸಲ್ಲಿಸಬೇಕು. ಸರಕಾರದ ಪ್ರಗತಿ ವಿವರ ನ್ಯಾಯಾಲಯಕ್ಕೆ ನೀಡಬೇಕಿದೆ.

ನೀತಿಯಲ್ಲಿ ವಲಸೆ ಮಕ್ಕಳ ಶಿಕ್ಷಣಕ್ಕಾಗಿ ನಿರ್ದೇಶಿಸಿರುವ ಎಲ್ಲ ಕ್ರಮಗಳು ಹಾಗೂ ಕಾರ್ಯ ತಂತ್ರಗಳ ಯೋಜನೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಯೋಜನಾ ನಿರ್ದೇಶಕರು ಕ್ರಮ ವಹಿಸಬೇಕು. 6 ರಿಂದ 14 ವರ್ಷದೊಳಗಿನ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು. ಈ ನೀತಿಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಕಾಯ್ದೆಯಲ್ಲಿದೆ.

ಸರ್ವ ಶಿಕ್ಷಣ ಅಭಿಯಾನ ಕಳೆದ ತಿಂಗಳು ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದ 3,216 ಶಾಲೆಗಳಲ್ಲಿ 9,558 ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರೆಂದು ಹೇಳಿದೆ. ಅದರಲ್ಲಿ 7,238 ಮಕ್ಕಳ ಪೋಷಕರಿಗೆ ನೋಟಿಸ್ ನೀಡಲಾಗಿದೆ. 311 ದೂರುಗಳನ್ನು ಮಕ್ಕಳ ಕಲ್ಯಾಣ ನಿಧಿಗೆ ನೀಡಲಾಗಿದೆ. ಇದರ ನಂತರವೂ 15 ದಿನಗಳ ಬಳಿಕ ಮತ್ತೆ ವಿದ್ಯಾರ್ಥಿಗಳ ಗೈರು ಪರಿಶೀಲಿಸಿದ ವೇಳೆ 8,627 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News