ಮಕ್ಕಳ ಕ್ರೀಡಾ ಪ್ರೋತ್ಸಾಹಕ್ಕೆ ಶಿಕ್ಷಕರ ನೇಮಕಾತಿ: ಸಿಎಂ ಯಡಿಯೂರಪ್ಪ

Update: 2019-12-12 17:45 GMT

ನಾಗಮಂಗಲ, ಡಿ.12: ಕಂಪ್ಯೂಟರ್ ಯುಗದಲ್ಲಿ ಮಕ್ಕಳ ಹೊರಾಂಗಣ ಚಟುವಟಿಕೆಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸರಕಾರ ತರಬೇತುದಾರರು ಹಾಗೂ ಫಿಟ್‍ನೆಸ್ ಶಿಕ್ಷಕರನ್ನು ನೇಮಕಾತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಗುರುವಾರ ಆಯೋಜಿಸಿದ್ದ 23ನೇ ರಾಜ್ಯಮಟ್ಟದ ಅಂತರ್ ಶಾಲಾ-ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ 36 ಹಿರಿಯ ಮತ್ತು 28 ಕಿರಿಯ ತರಬೇತುದಾರರು ಹಾಗೂ 12 ಫಿಟ್‍ನೆಸ್ ಪ್ರಶಿಕ್ಷಕರನ್ನು ನೇಮಕ ಮಾಡಲಾಗಿದೆ. ಪರಿಶಿಷ್ಟ ಜಾತಿಯ 225, ಪರಿಶಿಷ್ಟ ಪಂಗಡದ 50 ಕ್ರೀಡಾ ಸಾಧಕರಿಗೆ 4.13 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವತಿಯಿಂದ 28 ಯುವಕರಿಗೆ ಪರ್ವತಾರೋಹಣ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.

ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವವನ್ನು ಮಕ್ಕಳಲ್ಲಿ ತುಂಬಬೇಕು. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ  ಸಕರಾತ್ಮಕ ಪ್ರಯೋಜನಗಳಿವೆ. ಇದನ್ನು ಮನಗಂಡು ವಿದ್ಯಾರ್ಥಿ ಜೀವನದಲ್ಲೇ ಕ್ರೀಡೆಯಲ್ಲಿ ತಮ್ಮನ್ನು ನಾವು ತೊಡಗಿಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ಅವರು ಸಲಹೆ ನೀಡಿದರು.

ಅನ್ನ, ಅಕ್ಷರ, ಆರೋಗ್ಯ, ಅರಣ್ಯ, ಆಕಳು, ಆಶ್ರಯ, ಅಭಯ ಮತ್ತು ಆಧ್ಯಾತ್ಮವೆಂಬ ಅಷ್ಟ  ಸೂತ್ರಗಳನ್ನು ಡಾ. ಶ್ರೀ ಬಾಲಗಂಗಾಂಧರನಾಥ ಸ್ವಾಮೀಜಿ ಜೀವನದ ಗುರಿಗಳನ್ನಾಗಿಟ್ಟುಕೊಂಡಿದ್ದರು. ಮಕ್ಕಳು ಓದಿನ ಜತೆಗೆ ದಿನನಿತ್ಯ ಯಾವುದಾದರೂ ಒಂದು ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು ಎಂದು ಯಡಿಯೂರಪ್ಪ ಸ್ಮರಿಸಿದರು.

ಶ್ರೀಮಠದ ಪೀಠಾದ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯವಹಿಸಿದ್ದರು, ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮಿಜಿ, ಸಚಿವ ಆರ್.ಅಶೋಕ್, ಶಾಸಕರಾದ ಕೆ.ಸುರೇಶ್‍ಗೌಡ, ಮಸಾಲೆ ಜಯರಾಮು, ನಾರಾಯಣಗೌಡ, ಗೋಪಾಲಯ್ಯ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಇತರ ಗಣ್ಯರು ಉಪಸ್ಥಿತರಿದ್ದರು.

‘ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಕಾಣಬೇಕು ಎಂಬುದು ನನ್ನ ಆಸೆಯಿತ್ತು, ಉಪಚುನಾವಣೆಯಲ್ಲಿ ಕೆಸಿ.ನಾರಾಯಣಗೌಡ ಬಿಜೆಪಿಯಿಂದ ಗೆದ್ದು ಜಿಲ್ಲೆಯಲ್ಲಿ ಕಮಲದ ಮೊದಲ ಖಾತೆ ತೆರೆದಿರುವುದು ನನಗೆ ಖುಷಿ ತಂದಿದೆ.’
-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News