ಮಹಿಳೆಗೆ ಹಲ್ಲೆ ನಡೆಸಿ ಮಾಂಗಲ್ಯ ಸರ ಕಸಿಯಲು ಯತ್ನ

Update: 2019-12-12 17:59 GMT

ಪಾಂಡವಪುರ, ಡಿ.12: ಜಮೀನಿನಲ್ಲಿ ದನ ಮೇಯಿಸಲು ಹೋಗಿ ದೇವರಿಗೆ ಕೈ ಮುಗಿಯುವ ವೇಳೆ ಮಹಿಳೆಯೊರ್ವಳ ಮೇಲೆ ದುಷ್ಕರ್ಮಿಯೊಬ್ಬ ಕಲ್ಲು ಎತ್ತಿ ಹಾಕಿ ಮಾಂಗಲ್ಯ ಸರ ಕಿತ್ತೊಯ್ಯಲು ಯತ್ನಿಸಿದ ನಂತರ ಪರಾರಿಯಾಗಿರುವ ಘಟನೆ ಪಟ್ಟಣದ ಹಾರೋಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಗ್ರಾಮದ ನಿವಾಸಿ ರಾಮಕೃಷ್ಣ ಅವರ ಪತ್ನಿ ರೇಣುಕಮ್ಮ(62) ಎಂಬಾಕೆ ದುಷ್ಕರ್ಮಿಯಿಂದ ಹಲ್ಲೆಗೊಳಗಾದ ಮಹಿಳೆ.

ಘಟನೆ ವಿವರ: ಗುರುವಾರ ಬೆಳಗ್ಗೆ ಸುಮಾರು 10ರ ಸಮಯದಲ್ಲಿ ತಮ್ಮ ಜಮೀನಿನಲ್ಲಿ ದನ ಮೇಯಿಸಲು ಹೋಗಿದ್ದ ರೇಣುಕಮ್ಮ ನಂತರ ಹೊಸ್ತಿಲ ಹುಣ್ಣಿಮೆ ಹಿನ್ನೆಲೆಯಲ್ಲಿ ಬಿಸಿಲು ಮಾರಮ್ಮನ ದೇವಸ್ಥಾನದಕ್ಕೆ ದೇವರಿಗೆ ಕೈ ಮುಗಿಯಲು ಹೋದ ವೇಳೆ ಅಲ್ಲಿಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಯೊಬ್ಬ ಆಕೆಯ ಸೀರೆ ಹಿಡಿದೆಳೆದು ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಮಹಿಳೆ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ತಲೆ ಹಾಗೂ ಮುಖದ ಮೇಲೆ ಸೈಜುಗಲ್ಲು ಎಸೆದು ಪರಾರಿಯಾಗಿದ್ದಾನೆ.

ತಕ್ಷಣ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಜನರು ಓಡಿ ಬಂದಿದ್ದಾರೆ. ಬಳಿಕ ಗಾಯಗೊಂಡ ಮಹಿಳೆಯನ್ನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಡಿವೈಎಸ್ಪಿ ಅರುಣ್ ನಾಗೇಗೌಡ, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಎಂ.ರವೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News