ಜೆಡಿಎಸ್ ತೊರೆಯುವ ಬಗ್ಗೆ ಮಾಜಿ ಸಚಿವ ಜಿ.ಟಿ.ದೇವೆಗೌಡ ಸ್ಪಷ್ಟನೆ

Update: 2019-12-12 18:06 GMT

ಮೈಸೂರು,ಡಿ.12: ನಾನು ಜೆಡಿಎಸ್ ಶಾಸಕ. ಜೆಡಿಎಸ್ ಶಾಸಕನಾಗಿಯೇ ಇರುತ್ತೇನೆ. ನಾನು ಕಾಂಗ್ರೆಸ್ ಗೆ ಆಗಲಿ ಅಥವಾ ಬಿಜೆಪಿಗೆ ಆಗಲಿ ಹೋಗುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಜಿ.ಟಿ.ದೇವೆಗೌಡರು ಪಕ್ಷ ಬಿಡುವ ವಿಚಾರಕ್ಕೆ ತೆರೆ ಎಳೆದಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಬಿಟ್ಟು ಹೋಗುವುದಿಲ್ಲ. ಜೆಡಿಎಸ್ ಶಾಸಕನಾಗಿಯೇ ಇರುತ್ತೇನೆ. ಕಾಂಗ್ರೆಸ್ ಗಾಗಲಿ, ಬಿಜೆಪಿಗಾಗಲಿ ಅಥವಾ ಯಾವ ಪಕ್ಷದ ಕಡೆಯೋ ನಾನು ಮುಖ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ ಜಿ.ಟಿ ದೇವೇಗೌಡ, ಯಡಿಯೂರಪ್ಪನವರಿಗೆ ಈ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿ ಸಾಮರ್ಥ್ಯ ಇದೆ. ಅಷ್ಟೇ ಕಷ್ಟವೂ ಕೂಡ ಇದೆ. ಅವರು ಯಶಸ್ವಿಯಾಗಿ ರಾಜ್ಯವನ್ನು ಅಭಿವೃದ್ಧಿಪಡಿಸಿ ಆಡಳಿತ ನಡೆಸಲಿ ಎಂದು ಹಾರೈಸುತ್ತೇನೆ ಎಂದರು.

ಪರಾಜಿತ ಅಭ್ಯರ್ಥಿ ವಿಶ್ವನಾಥ್ ಅವರನ್ನು ಮಂತ್ರಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ನಾನು ಯಾರಿಗೂ ಏನು ಹೇಳುವುದಿಲ್ಲ. ನಾನು ಸಿಎಂ ಯಡಿಯೂರಪ್ಪಗೂ ಹೇಳುವುದಿಲ್ಲ. ಏನಾದ್ರೂ ನಾನು ವಿಶ್ವನಾಥ್ ಮಂತ್ರಿ ಮಾಡಿ ಅಂತಾ ಹೇಳಿದರೆ ನನ್ನ ವಿರುದ್ಧವೇ ತಿರುಗಿಬೀಳುವ ಸಾಧ್ಯತೆ ಇದೆ. ಇವನ್ಯಾರು ಮಂತ್ರಿ ಮಾಡಿ ಅಂತ ಹೇಳೋಕೆ ಅಂತನೂ ಕೇಳಬಹುದು. ಹೀಗಾಗಿ ನಾನು ಯಾರ ಪರವೂ ಮಾತಾನಾಡುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಆದಷ್ಟು ಬೇಗ ಗುಣಮುಖರಾಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ. ನಾನು ಸಿದ್ದರಾಮಯ್ಯ ಹಲವು ದಶಕಗಳಿಂದ ಸ್ನೇಹಿತರು. ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ನನಗೆ ಮಾಹಿತಿ ಬಂದಿದೆ. ಅವರು ವಿಶ್ರಾಂತಿ ಪಡೆಯದೇ ಸದಾಕಾಲವೂ ಓಡಾಡುವ ವ್ಯಕ್ತಿ. ಹೀಗಾಗಿ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ನುಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News