ಟಿಪ್ಪುವನ್ನು ಪರಿಚಯಿಸದೆ ಮೈಸೂರಿನ ಇತಿಹಾಸ ಬೋಧಿಸುವುದು ಅಸಾಧ್ಯ: ಸರಕಾರಿ ಸಮಿತಿ

Update: 2019-12-12 18:09 GMT

ಬೆಂಗಳೂರು,ಡಿ.12: ಕರ್ನಾಟಕ ಸರಕಾರವು ರಚಿಸಿದ್ದ ವಿದ್ವಾಂಸರು ಮತ್ತು ಇತಿಹಾಸ ತಜ್ಞರನ್ನೊಳಗೊಂಡ ಸಮಿತಿಯು ಶಾಲಾ ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನರ ಕುರಿತ ಅಧ್ಯಾಯಗಳನ್ನು ಕೈಬಿಡಬೇಕು ಎಂಬ ಬಿಜೆಪಿಯ ಬೇಡಿಕೆಗೆ ವಿರುದ್ಧವಾದ ಶಿಫಾರಸನ್ನು ಸಲ್ಲಿಸಿದೆ ಎಂದು ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.

 ಶಾಲಾ ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನರಿಗೆ ಸಂಬಂಧಿಸಿದ ವಿಷಯಗಳನ್ನು ಕೈಬಿಡುವಂತೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ಅವರನ್ನು ಆಗ್ರಹಿಸಿದ್ದರು. ರಾಜ್ಯ ಶಿಕ್ಷಣ ಮಂಡಳಿಯ 6,7 ಮತ್ತು 10 ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ಟಿಪ್ಪುವಿಗೆ ಸಂಬಂಧಿಸಿದ ವಿಷಯಗಳಿವೆ.

ಡಿ.9ರಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಗೆ ತನ್ನ ವರದಿಯನ್ನು ಸಲ್ಲಿಸಿರುವ ಸಮಿತಿಯು ಹಾಲಿ ಪಠ್ಯಪುಸ್ತಕಗಳಲ್ಲಿರುವ ಟಿಪ್ಪು ಸುಲ್ತಾನರ ಕುರಿತು ಅಧ್ಯಾಯಗಳು ಕೇವಲ ಪರಿಚಯಾತ್ಮಕ ಸ್ವರೂಪದ್ದಾಗಿವೆ ಹಾಗೂ ವಾಸ್ತವಿಕವಾಗಿವೆ ಮತ್ತು ಟಿಪ್ಪು ಸುಲ್ತಾನರನ್ನು ಪರಿಚಯಿಸದೆ ಮೈಸೂರಿನ ಇತಿಹಾಸವನ್ನು ಬೋಧಿಸುವುದು ಅಸಾಧ್ಯ. ಹೀಗಾಗಿ ಈ ಅಧ್ಯಾಯಗಳು ಪಠ್ಯಪುಸ್ತಕಗಳಲ್ಲಿ ಮುಂದುವರಿಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

‘ನಾವು ವಿವಾದವನ್ನು ಆಧರಿಸಿ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಇತಿಹಾಸ ತಜ್ಞರಾಗಿ ವಾಸ್ತವಿಕ ವರದಿಯನ್ನು ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ’ ಎಂಬ ಸಮಿತಿಯ ಸದಸ್ಯರೋರ್ವರ ಹೇಳಿಕೆಯನ್ನು ವರದಿಯು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News