ಶಿವಮೊಗ್ಗ ಮನಪಾ: ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸಲು 'ಇ-ಮೊಗ್ಗೆ' ತಂತ್ರಾಂಶ ಲೋಕಾರ್ಪಣೆ

Update: 2019-12-13 11:29 GMT

ಶಿವಮೊಗ್ಗ, ಡಿ.13: ಶಿವಮೊಗ್ಗ ನಗರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಮಹಾನಗರ ಪಾಲಿಕೆ ಆಡಳಿತ ಮಹತ್ವದ ಹೆಜ್ಜೆಯಿರಿಸಿದೆ. ಪಾಲಿಕೆಗೆ ವಿವಿಧ ಸೌಲಭ್ಯಗಳನ್ನು ಬಯಸಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ತ್ವರಿತಗತಿಯ ಸೇವೆ ದೊರಕಿಸಿಕೊಡಲು ಅನುಕೂಲವಾಗುವಂತೆ ರೂಪಿಸಿ ಅನುಷ್ಠಾನಗೊಳಿಸಿರುವ ಅತ್ಯಾಧುನಿಕ 'ಇ-ಮೊಗ್ಗೆ' ತಂತ್ರಾಂಶವನ್ನು ಮಹಾನಗರಪಾಲಿಕೆ ಮಹಾಪೌರರಾದ ಲತಾ ಗಣೇಶ್‍ ರವರು ಲೋಕಾರ್ಪಣೆಗೊಳಿಸಿದ್ದಾರೆ.

ಶುಕ್ರವಾರ ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ವ್ಯವಸ್ಥೆಗೆ ಚಾಲನೆ ನೀಡಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. 'ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡುವುದು, ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸಲು ಈ ತಂತ್ರಾಂಶ ಸಹಕಾರಿಯಾಗಲಿದೆ' ಎಂದು ಹೇಳಿದರು. 

ಉಪ ಮಹಾಪೌರ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಶಿವಮೊಗ್ಗ ಮಹಾನಗರಪಾಲಿಕೆ ಮಹತ್ವದ ನಿರ್ಣಯವನ್ನು ಕೈಗೊಂಡು ಅನುಷ್ಠಾನಕ್ಕೆ ತಂದಿರುವುದು ಹರ್ಷದ ಸಂಗತಿಯಾಗಿದೆ. ಜನಸಾಮಾನ್ಯರ ಅರ್ಜಿಗಳು ಸಕಾಲದಲ್ಲಿ ವಿತರಣೆಯಾಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಸಾಮಾನ್ಯವಾಗಿದ್ದವು. 

ಇ-ತಂತ್ರಾಂಶದಿಂದಾಗಿ ಈ ದೂರುಗಳಿಗೆ ಕಡಿವಾಣ ಬೀಳಲಿದೆ. ವಿಶೇಷವಾಗಿ ಕಂದಾಯ ವಿಭಾಗದ ಅರ್ಜಿಗಳ ಸಕಾಲಿಕವಾಗಿ ವಿಲೇವಾರಿಯಾಗಲಿದೆ. 2020ರ ಜನವರಿ 1 ರಿಂದ ಇ-ತಂತ್ರಾಂಶ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು. 

ಪ್ರಸ್ತುತ ವಿಭಾಗದಲ್ಲಿ ಎಲ್ಲಾ ಖಾತೆಗಳ ವರ್ಗಾವಣೆಯನ್ನು ಪಿ.ಎಲ್.ಒ. ತಂತ್ರಾಂಶದಲ್ಲಿ ನಿರ್ವಹಿಸಿ ಅನುಮೋದನೆಯಾದ ನಂತರದಲ್ಲಿ ಓಯಸಿಸ್ ತಂತ್ರಾಂಶದಲ್ಲಿ ವರ್ಗಾವಣೆ/ಬದಲಾವಣೆಗಳನ್ನು ಮಾಡಲಾಗುತ್ತಿತ್ತು. ಪ್ರತಿ ಸೊತ್ತಿಗೂ ತಂತ್ರಾಂಶದಲ್ಲಿ ಪ್ರತ್ಯೇಕ ಪಿ.ಐ.ಡಿ. (ಆಸ್ತಿ ಸಂಖ್ಯೆ) ನೀಡಲಾಗಿದೆ. ಪ್ರತಿ ಸ್ವತ್ತಿನ ಸಂಪೂರ್ಣ ಮಾಹಿತಿಗಳೊಂದಿಗೆ ಸ್ವತ್ತಿನ ಛಾಯಾಚಿತ್ರವನ್ನು ಅಳವಡಿಸಲಾಗಿದೆ. ಆಸ್ತಿ ತೆರಿಗೆ ಸಂಗ್ರಹಣೆಯನ್ನು ಸಂಪೂರ್ಣ ಆನ್‍ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ ಎಂದರು.

ಪಿ.ಒ.ಎಸ್. ಯಂತ್ರಗಳ ಮೂಲಕ ಸ್ವತ್ತಿನ ಪ್ರದೇಶದಲ್ಲಿಯೇ ಕರವಸೂಲಿಗಾರರಿಂದ ಆನ್‍ಲೈನ್ ಮೂಲಕ ತೆರಿಗೆ ಸಂಗ್ರಹಣೆ ಪ್ರಗತಿಯಲ್ಲಿದೆ. ಆಸ್ತಿ ತೆರಿಗೆ ನಮೂನೆ-3 ನ್ನು ಏಕಗವಾಕ್ಷಿಯ ಮೂಲಕ ಗಣಕೀಕೃತ ನಕಲನ್ನು ನೀಡಲಾಗುತ್ತಿದೆ. ಕಾಲಮಿತಿ ಇದ್ದರೂ ಸಹ ನಿಗದಿತ ಅವದಿಯಲ್ಲಿ ವಿಲೇಯಾಗದ ಕಡತಗಳ ವಿಲೇವಾರಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಈ ನ್ಯೂನತೆ ಸರಿಪಡಿಸಲಾಗಿದೆ ಎಂದು ತಿಳಿಸಿದರು. 

ಅರ್ಜಿದಾರರಿಗೆ ಕಡತದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಹಾಗೂ ಕಡತ ಅನುಮೋದನೆಯಾದ ಬಗ್ಗೆ ಆಸ್ತಿ ವರ್ಗಾವಣೆ ಶುಲ್ಕದ ಕುರಿತು ಅರ್ಜಿದಾರರಿಗೆ ತಕ್ಷಣದ ಮಾಹಿತಿ ಲಭ್ಯವಾಗಲಿದೆ. ಹಾಗೆಯೇ ಕಡತಗಳನ್ನು ಅನುಕ್ರಮವಾಗಿ ಆದ್ಯತೆಯ ಮೇರೆಗೆ ವಿಲೇ ಮಾಡಲು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಕಂದಾಯ ವಿಭಾಗದಲ್ಲಿ ಕಡತಗಳ ನಿರ್ವಹಣೆಗೆ ಹಾಗೂ ಖಾತೆಗಳ ವಿವರ/ಮಾಹಿತಿಗಳನ್ನು ಒಳಗೊಂಡಂತೆ ಎಲ್ಲಾ ಕಾರ್ಯಗಳನ್ನು ಡಿಜಿ ಫೈಲ್ ಎಂಬ ಒಂದೇ ತಂತ್ರಾಂಶದಲ್ಲಿ ನಿರ್ವಹಿಸಲಾಗುತ್ತಿರುವುದು ವಿಶೇಷವಾಗಿದೆ ಎಂದರು.

ಇಂತಹ ತಂತ್ರಾಂಶದ ಅಳವಡಿಕೆಯಿಂದ ತ್ವರಿತ ಸೇವೆ ಜೊತೆಗೆ ಭ್ರಷ್ಠಾಚಾರಕ್ಕೆ ಕಡಿವಾಣ ಬೀಳಲಿದೆ. ಈ ತಂತ್ರಾಂಶದಿಂದ ಕಡತ ವಿಲೇವಾರಿಯ ಹಂತಗಳ ಬಗ್ಗೆ ಅರ್ಜಿದಾರರ ಮೊಬೈಲ್‍ಗೆ ಸಕಾಲಿಕ ಸಂದೇಶ ರವಾನೆಯಾಗಲಿದೆ. ಸದರಿ ತಂತ್ರಾಂಶ ಬಳಕೆಯಿಂದ ಅಧಿಕಾರಿ/ಸಿಬ್ಬಂದಿಗಳಿಗೆ ಕಾರ್ಯದ ಒತ್ತಡ ಕಡಿಮೆಯಾಗಿ ಶೀಘ್ರವಾಗಿ ಸೇವೆ ನೀಡಲು ಅವಕಾಶವಾಗಲಿದೆ. ಅರ್ಜಿದಾರರಿಗೆ ಮೊಬೈಲ್ ಮೂಲಕವೇ ಸಂದೇಶ ರವಾನೆಯಾಗುವುದರಿಂದ ಅನವಶ್ಯಕವಾಗಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಖಾ, ಸುವರ್ಣ ಶಂಕರ್, ಶಂಕರ್, ಜ್ಞಾನೇಶ್ವರ್, ಮಹಾ ನಗರ ಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ ಸೇರಿದಂತೆ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News