ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ವರ್ಷ: ಇನ್ನೂ ಮಾಸದ ಪಾಶವೀ ಕೃತ್ಯದ ನೆನಪು

Update: 2019-12-14 04:23 GMT

ಹನೂರು, ಡಿ.14: ಇಡೀ ಮನುಕುಲದ ಮುಗ್ಧ ಮನಸ್ಸನ್ನೇ ಕದಡಿದ ಹಾಗೂ ದೇವರನ್ನೆ ನಂಬಿ ಬದುಕುವ ಜನರನ್ನೆ ಬೆಚ್ಚಿಬೀಳೀಸುವ  ದುರ್ಘಟನೆ. ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ ಇದು ನಡೆದದ್ದು 2018 ರ ಡಿಸಂಬರ್ 14 ರ ಶುಕ್ರವಾರದಂದು.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿಯ ಕಾಡಿನಂಚಿನಲ್ಲಿ ಇರುವ ಕಿಚ್ಚಗುತ್ತಿ ಮಾರಮ್ಮ ದೇವಾಲಯದಲ್ಲಿ  ದುರ್ಘಟನೆಯೊಂದು  ನಡೆದೇ ಬಿಟ್ಟಿತ್ತು.

ಆ ದಿನ ಶುಕ್ರವಾರ ಮಾರ್ಟಳ್ಳಿ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಕಿಚ್ಚಗುತ್ತಿ ಮಾರಮ್ಮಳ  ದರ್ಶನಕ್ಕೆ ಭಕ್ತಿಯಿಂದಲೇ ಹೋಗಿದ್ದರು.  ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ನೀಡುತ್ತಿದ್ದ  ಪ್ರಸಾದವನ್ನು ಭಕ್ತಿಯಿಂದ  ಕಣ್ಣಿಗೊತ್ತಿಕೊಂಡು ಸೇವಿಸಿದ್ದರು. ಆದರೆ ಅಂದು ಪ್ರಸಾದ ಸೇವಿಸಿದವರ ಪೈಕಿ 17 ಮಂದಿ ನರಳಾಡಿ ಸಾವನ್ನಪ್ಪಿದ್ದರು. 120ಕ್ಕೂ ಅಧಿಕ ಮಂದಿ ಸಾವು ಬದುಕಿನ ನಡುವೆ ಹೋರಾಟ‌ ನಡೆಸಿ ಬದುಕಿದ್ದಾರೆ. ಆದರೆ ವಿಷಪ್ರಾಶನದ ದುಷ್ಪರಿಣಾಮದಿಂದಾಗಿ ಇಂದಿಗೂ ಆಗಾಗ್ಗೆ ಅನಾರೋಗ್ಯಕ್ಕೀಡಾಗುತ್ತಿದ್ದಾರೆ.  

ಈ ದುರ್ಘಟನೆ ಆಕಸ್ಮಿಕವಲ್ಲ, ಬದಲಿಗೆ ಇದು ದೇವಾಲಯದ ಆಸ್ತಿ ಅಧಿಕಾರ ಕಬಳಿಸುವ ಸಲುವಾಗಿ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಪ್ರಸಾದಕ್ಕೆ ವಿಷ ಬೆರೆಸಿರುವುದು ಬಳಿಕ ಪೊಲೀಸ್ ತನಿಖೆಯಿಂದ ಬಹಿರಂಗಗೊಳ್ಳುತ್ತಿದ್ದಂತೆ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದರು.

ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಕೊಳ್ಳೇಗಾಲ ಪೊಲೀಸ್ ಇಲಾಖೆಯ ಡಿವೈಎಸ್‍ಪಿ ಪುಟ್ಟಮಾದಯ್ಯರವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಈ ಪ್ರಕರಣಕ್ಕೆ ಸಂಬಂಧಿಸಿ ಡಿಸೆಂಬರ್ 19ರಂದು ಪ್ರಮುಖ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಟ್ರಸ್ಟ್‍ನ ವ್ಯವಸ್ಥಾಪಕ ಮಾದೇಶ್, ಆತನ ಪತ್ನಿ ಅಂಬಿಕಾ ಮತ್ತು ದೊಡ್ಡಯ್ಯ ತಂಬಡಿ ಎಂಬುವವರನ್ನು ಬಂಧಿಸಿ ಜೈಲಿಗೆ ಕಳುಹಿಸಿಲಾಯಿತು.

ಇಷ್ಟೆಲ್ಲಾ ಆಗಿ ವರ್ಷವಾದರೂ ಸಹ ಆಭಾಗದ ಜನರ ಮನಸ್ಸಿನಲ್ಲಿ ಕಹಿ ಘಟನೆ ಇನ್ನೂ ಜೀವಂತವಾಗಿದೆ. ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ನಾಲ್ವರು ಆರೋಪಿಗಳು ಜೈಲಿನಿಂದ ಬಿಡುಗಡೆಗೆ ಸುಪ್ರೀಂ ಕೋರ್ಟ್ ತನಕ ಹೋಗಿ ವಿಫಲರಾಗಿ ಜೈಲ ವಾಸ ಖಾಯಂ ಮಾಡಿಕೊಂಡಿದ್ದಾರೆ ಇತ್ತ ವರ್ಷದಿಂದ ಪೂಜೆ ಕಾಣದ ಕಿಚ್ಚಗುತ್ತಿ ಮಾರಮ್ಮದೇವಾಲಯ ಇದೀಗ ಮುಜರಾಯಿ ಇಲಾಖೆ ವಶಕ್ಕೆ ಬಂದಿದ್ದರೂ ಸಹ ಪೂಜೆ ಪುರಸ್ಕಾರ ನಡೆಯುತ್ತಿಲ್ಲ.

Writer - ವರದಿ: ಅಭಿಲಾಷ್ ಗೌಡ

contributor

Editor - ವರದಿ: ಅಭಿಲಾಷ್ ಗೌಡ

contributor

Similar News