ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲು ತಾನು ಸಿದ್ಧ ಎಂದ ಪವನ್: ಇವರ ಹಿನ್ನೆಲೆಯೇನು ಗೊತ್ತಾ?

Update: 2019-12-14 12:09 GMT

ಲಕ್ನೋ: ಮೀರತ್ ಕಾರಾಗೃಹದ `ಹ್ಯಾಂಗ್ ಮ್ಯಾನ್' ಆಗಿರುವ ಪವನ್ ಜಲ್ಲಾದ್ ತಾನು ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವ ಕಾರ್ಯ ನಡೆಸಲು ಸಿದ್ಧನಿರುವುದಾಗಿ ಹೇಳಿದ್ದಾರೆ.

ತಮ್ಮ ಕುಟುಂಬದ ಮೂರನೇ ತಲೆಮಾರಿನ ಹ್ಯಾಂಗ್ ಮ್ಯಾನ್ ಆಗಿರುವ ಪವನ್, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಇಬ್ಬರು ಹಂತಕರು ಹಾಗೂ ಕುಖ್ಯಾತ ಅಪರಾಧಿಗಳಾದ ಬಿಲ್ಲಾ ಮತ್ತು ರಂಗಾರನ್ನು ತನ್ನ ಅಜ್ಜ ಗಲ್ಲಿಗೇರಿಸಿದ್ದರು ಎಂದು ಹೇಳುತ್ತಾರೆ.

"ಇಲಾಖೆಯ ಅಧಿಕಾರಿಗಳು ನನ್ನಲ್ಲಿ ಕೇಳಿದರೆ ನಾನು ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲು ಸಿದ್ಧ'' ಎಂದು ಆತ ತಿಳಿಸಿದ್ದಾರೆ. ನಿರ್ಭಯಾ ಪ್ರಕರಣದ ನಾಲ್ಕು ಮಂದಿ  ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಯುತ್ತಿರುವಂತೆಯೇ ದಿಲ್ಲಿಯ ತಿಹಾರ್ ಜೈಲಿನಿಂದ ಹ್ಯಾಂಗ್ ಮ್ಯಾನ್ ಬೇಕೆಂದು ಹೇಳಿ ತಮಗೆ ಮನವಿ ಬಂದಿದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಬಂದೀಖಾನೆ) ಆನಂದ್ ಕುಮಾರ್ ಹೇಳಿದ್ದಾರೆ.

ಪವನ್ ಜಲ್ಲಾದ್ ಸುಮಾರು 55 ವರ್ಷ ವಯಸ್ಸಿನವರಾಗಿದ್ದು ಅವರು ಹೇಳುವಂತೆ ಅವರ ಅಜ್ಜ ಕಲ್ಲಿ ಜಲ್ಲಾದ್ ಹೊರತಾಗಿ ತಂದೆ ಬಬ್ಬು ಜಲ್ಲಾದ್ ಕೂಡ ಇದೇ ಕಾಯಕ ಮಾಡುತ್ತಿದ್ದರು. ಅಜ್ಜನ ಕೆಲಸದಲ್ಲಿ ಐದು ಬಾರಿ ಸಹಾಯ ಮಾಡಿದ್ದೇನೆ. ಅವರೊಂದಿಗೆ ಗಲ್ಲು ಶಿಕ್ಷೆ ಪ್ರಕರಣ ಸಂದರ್ಭ ಪಟಿಯಾಲ, ಅಲಹಾಬಾದ್, ಆಗ್ರಾ ಹಾಗೂ ಜೈಪುರ್‍ಗೂ ಹೋಗಿದ್ದೇನೆ ಎಂದಿದ್ದಾರೆ.

ತನ್ನ ವೃತ್ತಿಯ ಬಗ್ಗೆ ತನಗೆ ಸಮಾಧಾನವಿಲ್ಲ. ಏಕೆಂದರೆ ವೇತನವನ್ನು ರೂ 3,000ದಿಂದ ರೂ 5000ಕ್ಕೆ ಏರಿಸಲಾಗಿದೆ, ಇದು ಏನೇನೂ ಸಾಲದು ಎಂದು ಜಲ್ಲಾದ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News