ಪೌರತ್ವ ತಿದ್ದುಪಡಿ ಕಾನೂನು ದೇಶಕ್ಕೆ ಮಾರಕ: ನ್ಯಾ.ಸಂತೋಷ್ ಹೆಗ್ಡೆ

Update: 2019-12-19 06:42 GMT

ಮೈಸೂರು,ಡಿ.14: ಪೌರತ್ವ ತಿದ್ದುಪಡಿ ಕಾನೂನು ಜಾರಿ ದೇಶಕ್ಕೆ ಮಾರಕ ಎಂದು ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಯಲದ ಆವರಣದ ಕಾವೇರಿ ಸಭಾಂಗಣದಲ್ಲಿ ಶನಿವಾರ ಅಖಿಲ ಭಾರತ ವಕೀಲರ 8ನೆ ರಾಜ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಸರಿಯಲ್ಲ, ಒಂದು ಧರ್ಮವನ್ನು ಹೊರಗಿಟ್ಟು ಕಾಯ್ದೆ ರೂಪಿಸುವುದು ಸಂವಿಧಾನ ವಿರೋಧಿ. ಎಲ್ಲರೂ ನಮ್ಮ ದೇಶದಲ್ಲಿ ಜೀವಿಸುವ ಹಕ್ಕನ್ನು ಹೊಂದಿದ್ದಾರೆ. ಯಾವುದೋ ಒಂದು ಧರ್ಮವನ್ನು ಹೊರಗಿಡಬೇಕು ಎಂಬ ಉದ್ದೇಶದಿಂದ ಇಂತಹ ಕಾಯ್ದೆ ಜಾರಿ ಮಾಡುವುದು ಸರಿಯಲ್ಲ. ಇದು ದೇಶಕ್ಕೆ ಅಪಾಯಕಾರಿ. ಅಂಬೇಡ್ಕರ್ ನೀಡಿರುವ ಕಾನೂನು ಎಲ್ಲರಿಗೂ ಒಂದೇ, ನಮ್ಮ ದೇಶದಲ್ಲಿ ಯಾರೇ ನಿರಾಶ್ರಿತರು ಬಂದರೆ ಅವರಿಗೆ ಬದುಕಲು ಅವಕಾಶ ಕಲ್ಪಿಸಬೇಕು. ಅದನ್ನು ಬಿಟ್ಟು ಒಂದು ಧರ್ಮವನ್ನು ಟಾರ್ಗೆಟ್ ಮಾಡಿ ಪೌರತ್ವ ಕಾಯ್ದೆ ಜಾರಿ ಮಾಡುವುದು ಖಂಡನೀಯ ಎಂದು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇಂತಹ ವಾತಾವರಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಬಾರದಿತ್ತು. ಈಶಾನ್ಯ ರಾಜ್ಯಗಳ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡನೀಯ. ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.

ತೆಲಂಗಾಣದಲ್ಲಿ ನಡೆದ ಎನ್‍ಕೌಂಟರ್ ಕಾನೂನು ಬಾಹಿರ. ಅತ್ಯಾಚಾರ ಪ್ರಕರಣದ ಕುರಿತು ತನಿಖೆ ಹಂತದಲ್ಲೇ ಇಂತಹ ಘಟನೆ ನಡೆದಿರುವುದುದು ಸರಿಯಲ್ಲ. ಸತ್ತವರು ಅಪರಾಧಿಗಳೋ ನಿರಪರಾಧಿಗಳೋ ಎಂಬುದು ಗೊತ್ತಿಲ್ಲ. ಆದರೆ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಾಗಬೇಕು ಎಂದು ಹೇಳಿದರು.

ಆಂಧ್ರ ಪ್ರದೇಶ ಜಾರಿಗೆ ತಂದಿರುವ ದಿಶಾ ಕಾನೂನು ಸರಿಯಾದ ಕ್ರಮವಲ್ಲ. 21 ದಿನಗಳಲ್ಲಿ ಯಾವುದೇ ಪ್ರಕರಣವನ್ನು ಇತ್ಯರ್ಥ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಮತ್ತೊಮ್ಮೆ ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಇಂದಿನ ರಾಜಕೀಯ ಪರಿಸ್ಥಿತಿ ತುಂಬಾ ಬದಲಾವಣೆಯಾಗಿದೆ. ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕಿ ಭವ್ಯ ಸ್ವಾಗತ ನೀಡುವ ಮಟ್ಟಕ್ಕೆ ಬದಲಾಗಿದೆ. ಇಂದಿನ ಯುವ ಪೀಳಿಗೆಯು ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಭಾರತದಲ್ಲಿ 2ಜಿ ಹಗರಣ, ಕಾಮನ್‍ವೆಲ್ತ್ ಹಗರಣ, ಕಲ್ಲಿದ್ದಲು ಹಗರಣಗಳಿಂದ ಹಣ ಸಂಪೂರ್ಣ ಸೋರಿಕೆಯಾಗಿದೆ. ಅಧಿಕಾರಿಗಳ ದುರಾಸೆಯಿಂದ ಈ ರೀತಿಯ ಹಣ ಸೋರಿಕೆಯಾಗುತ್ತಿದೆ. ಅಧಿಕಾರಿಗಳೇ ಭ್ರಷ್ಟರಾದರೆ ಭಾರತದ ಅಭಿವೃದ್ದಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದ ಮಾಜಿ ಅಡ್ವೊಕೇಟ್ ಜನರಲ್ ಬಿಕಾಸ್ ರಂಜನ್ ಭಟ್ಟಾಚಾರ್ಯ ಮಾತನಾಡಿ, ಭಾರತ ಈಗ ಗಾಂಧಿ ಹಾಗೂ ಅಂಬೇಡ್ಕರ್ ಚಿಂತಿಸಿದ ಭಾರತವಾಗಿಲ್ಲ. ಇಂದು ಭಾರತ ಜಾತಿಗಳ ಯುದ್ಧದಿಂದ ಕೂಡಿದೆ. ಅಂಬೇಡ್ಕರ್ ರಾಜಕೀಯ ಶಕ್ತಿಯಿಂದ ಭಾರತದಲ್ಲಿ ಅಭಿವೃದ್ದಿ ಸಾಧ್ಯ ಎಂದಿದ್ದರು. ಆದರೆ ಜಾತಿ ವ್ಯವಸ್ಥೆ ರಾಜಕೀಯದಲ್ಲಿ ಬೆರೆತು ಹಳ್ಳ ಹಿಡಿದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವಕೀಲರ ಸಂಘದ ರಾಜ್ಯಾಧ್ಯಕ್ಷ ಜಗದೀಶ್, ಪಿ.ಪಿ.ಬಾಬುರಾಜ್, ಉಮೇಶ್, ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News