ಐತಿಹಾಸಿಕ ಕೊಳಕೇರಿ ನಾಡ್ ಮಂದ್‍ನಲ್ಲಿ ‘ಹುತ್ತರಿ ಕೋಲಾಟ’

Update: 2019-12-15 18:02 GMT

ಮಡಿಕೇರಿ ಡಿ.15: ನಾಪೋಕ್ಲು ಬಳಿಯ ಕೊಳಕೇರಿಯ ಐತಿಹಾಸಿಕ ಹಿನ್ನೆಲೆಯ ಬಿದ್ದಾಟಂಡ ವಾಡೆ ನಾಡ್ ಮಂದ್‍ನಲ್ಲಿ ಶನಿವಾರ ಮತ್ತು  ಭಾನುವಾರದಂದು ‘ಹುತ್ತರಿ ಹಬ್ಬದ ಕೋಲಾಟ’ ಸಂಭ್ರಮದಿಂದ ನಡೆಯಿತು.

ಹುತ್ತರಿ ಹಬ್ಬ ಕಳೆದು ಊರ್ ಮಂದ್‍ನಲ್ಲಿ ಈಡ್ ಕಾರ್ಯಕ್ರಮ ಮುಗಿದ ಬಳಿಕ ಎಲ್ಲಾ ಊರ್ ಮಂದ್‍ನವರು ನಾಡ್ ಮಂದ್ ಕೊಳಕೇರಿ ಗ್ರಾಮದ ನೂರಂಬಾಡ ಬಿದ್ದಾಟಂಡ ವಾಡೆಯಲ್ಲಿ ಸಮಾವೇಶಗೊಳುವುದು ವಾಡಿಕೆ. ಅದರಂತೆ ನಾಪೋಕ್ಲು ಗ್ರಾಮ, ಕೊಳಕೇರಿ ಗ್ರಾಮ ಮತ್ತು ಬೇತು ಗ್ರಾಮದ ಗ್ರಾಮಸ್ಥರು ಊರ್ ಮಂದ್ ಮುಗಿಸಿ ಬಿದ್ದಾಟಂಡ ವಾಡೆಯ ನಾಡ್ ಮಂದ್‍ಗೆ ದುಡಿಕೊಟ್ಟ್ ಪಾಟ್‍ನೊಂದಿಗೆ ಆಗಮಿಸಿದರು. ಈ ಸಂದರ್ಭ ಬಿದ್ದಾಟಂಡ ವಾಡೆಯ ಹತ್ತಿರವಿರುವ ಈಶ್ವರ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮಕ್ಕಿ ದೇವಾಲಯದಿಂದ ಆಗಮಿಸುವ ತಿರುವಾಯುಧ, ಕಾಪಾಳ ಕಳಿಯೊಂದಿಗೆ ಆಗಮಿಸುವ ಬೇತು ಗ್ರಾಮಸ್ಥರನ್ನು ವಾಡೆಯ ಸಮೀಪ ಪಟಾಕಿಗಳ ಭರಾಟೆಯ ನಡುವೆ ಸ್ವಾಗತಿಸಿ, ದುಡಿಕೊಟ್ಟ್ ಹಾಡಿನ ಮೂಲಕ ಮಂದ್‍ಗೆ ಮೂರು ಸುತ್ತು ಬಂದು ತಿರುವಾಯುಧ ಮತ್ತು ಕೋಲನ್ನು ಮರದ ಕೆಳಗೆ ಇಡಲಾಯಿತು. ಅದರಂತೆ ನಾಪೋಕ್ಲು ಗ್ರಾಮದಿಂದ ಆಗಮಿಸುವ ಊರ್ ಮಂದ್‍ನವರನ್ನು ದುಡಿ ಕೊಟ್ಟ್ ಪಾಟ್‍ನ ಮೂಲಕ ಸ್ವಾಗತಿಸಿ ವಾಡೆಯಲ್ಲಿರುವ ಬಸುರಿ ಮರದ ಕೆಳಗೆ ಕೋಲನ್ನಿಟ್ಟು ಎಲ್ಲಾ ಮೂರು ಊರಿನವರು ಸೇರಿ ಬಿದ್ದಾಟಂಡ ವಾಡೆಯಲ್ಲಿ ಕೋಲಾಟ ನಡೆಸಿ ಸಂಭ್ರಮಿಸಿದರು. 

ವಿಶೇಷತೆ ಎಂದರೆ ಬಿದ್ದಾಟಂಡ ವಾಡೆ ಮಂದ್‍ನಲ್ಲಿ ವಾರ್ಷಿಕವಾಗಿ ಎರಡು ದಿನ ಕೋಲಾಟ ನಡೆಸುತ್ತಾರೆ. ಮೊದಲ ದಿನ ದೊಡ್ಡ ಕೋಲು ಎರಡನೆ ದಿನ ಸಣ್ಣ ಕೋಲು. ಮೊದಲ ದಿನದ ಕೋಲಾಟ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ. ಅದರಂತೆ ಕೋಲಾಟ ಮುಗಿದ ಮೇಲೆ ಆಯಾಯ ಗ್ರಾಮಸ್ಥರು ಮಕ್ಕಿ ದೇವಾಲಯಕ್ಕೆ ಕೋಲನ್ನು ಒಪ್ಪಿಸುವುದು ನಡೆದು ಕೊಂಡು ಬಂದ ಪದ್ಧತಿ.

ಮಕ್ಕಿ ದೇವಾಲಯದಿಂದ ಆಗಮಿಸಿದ ಕಾಪಾಳ ವೇಷ ಹಾಕಿದವರು ಮೈಗೆ ಮಸಿ ಬಳಿದುಕೊಂಡು ಕುಣಿದು ಕುಪ್ಪಳಿಸಿದರು. ಈ ಪದ್ಧತಿಯು ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಆಚರಣೆಯಲ್ಲಿದೆ. ಕಾರ್ಯಕ್ರಮದಲ್ಲಿ  ಕೊಡವ ಅಕಾಡಮಿಯ ಮಾಜಿ  ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ನಾಪೋಕ್ಲು, ಕೊಳಕೇರಿ, ಬೇತು, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News