​ಜಾರ್ಖಂಡ್ : ನಾಲ್ಕನೇ ಹಂತದ ಮತದಾನ ಆರಂಭ

Update: 2019-12-16 03:33 GMT

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ ಬೆಳಗ್ಗೆ ಆರಂಭವಾಗಿದೆ. ಐದು ಹಂತಗಳ ಮತದಾನದಲ್ಲಿ ರಾಜ್ಯ ವಿಧಾನಸಭೆಯ 15 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಇಬ್ಬರು ಸಚಿವರು ಹಾಗೂ 12 ಮಂದಿ ಹಾಲಿ ಶಾಸಕರು ಅದೃಷ್ಟ ಪರೀಕ್ಷೆಗೆ ಕಣದಲ್ಲಿದ್ದಾರೆ.

ಈ ಹಂತದಲ್ಲಿ ಸುಮಾರು 50 ಲಕ್ಷ ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದು, 22 ಮಹಿಳೆಯರು ಹಾಗೂ ತೃತೀಯ ಲಿಂಗಿಯೊಬ್ಬರು ಸೇರಿದಂತೆ 221 ಮಂದಿಯ ರಾಜಕೀಯ ಭವಿಷ್ಯ ಬರೆಯಲಿದ್ದಾರೆ. 15 ಸ್ಥಾನಗಳ ಪೈಕಿ ಐದು ಸ್ಥಾನಗಳು ನಕ್ಸಲ್‌ ಪೀಡಿತ ಪ್ರದೇಶದಲ್ಲಿವೆ. ಮತದಾನ ಶಾಂತಿಯುತವಾಗಿ ನಡೆಯಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಒಟ್ಟು 6101 ಮತಗಟ್ಟೆಗಳ ಪೈಕಿ 587 ಮತಗಟ್ಟೆಗಳು ಅತಿಸೂಕ್ಷ್ಮ ಮತಗಟ್ಟೆಗಳು ಹಾಗೂ 405 ಸೂಕ್ಷ್ಮ ಮತಗಟ್ಟೆಗಳು ಎಂದು ಮುಖ್ಯ ಚುನಾವಣಾ ಅಧಿಕಾರಿ ವಿನಯ್ ಕುಮಾರ್ ಚೌಬೆ ಹೇಳಿದ್ದಾರೆ.

ಕಂದಾಯ ಸಚಿವ ಅಮರ್ ಕುಮಾರ್ ಬೌರಿ, ಕಾರ್ಮಿಕ ಸಚಿವ ರಾಜ್ ಪಲಿವಾರ್ ಕಣದಲ್ಲಿರುವ ಪ್ರಮುಖರು. 2014ರ ಚುನಾವಣೆಯಲ್ಲಿ ಈ 15 ಕ್ಷೇತ್ರಗಳ ಪೈಕಿ 11 ಸ್ಥಾನಗಳನ್ನು ಬಿಜೆಪಿ ಬಾಚಿಕೊಂಡಿತ್ತು. ಇದರಿಂದಾಗಿ ಆಡಳಿತ ಪಕ್ಷಕ್ಕೆ ಈ ಹಂತ ನಿರ್ಣಾಯಕ ಎನಿಸಿದೆ. ಜೆಎಂಎಂ, ಎಜೆಎಸ್‌ಯು ಪಾರ್ಟಿ, ಜಾರ್ಖಂಡ್ ವಿಕಾಸ್ ಮೋರ್ಚಾ- ಪ್ರಜಾತಾಂತ್ರಿಕ್ ಮತ್ತು ಮಾರ್ಕ್ಸಿಸ್ಟ್ ಕೋ ಆರ್ಡಿನೇಷನ್ ಕಮಿಟಿ ಕಳೆದ ಬಾರಿ ತಲಾ ಒಂದು ಸ್ಥಾನ ಹಂಚಿಕೊಂಡಿದ್ದವು.

ಅತ್ತಿಗೆಯ ನಡುವಿನ ಕಾಳಗದಿಂದಾಗಿ ಝಾರಿಯಾ ಕ್ಷೇತ್ರ ಇಡೀ ರಾಜ್ಯದ ಕುತೂಹಲ ಕೆರಳಿಸಿದೆ. ಬಿಜೆಪಿಯ ರಾಗಿಣಿ ಸಿಂಗ್ ಹಾಗೂ ಕಾಂಗ್ರೆಸ್‌ನ ಪೂರ್ಣಿಮಾ ಸಿಂಗ್ ಇಲ್ಲಿ ಪರಸ್ಪರ ಸೆಣೆಸುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಮಾವ- ಅಳಿಯ ಕೂಡಾ ಕಣದಲ್ಲಿದ್ದು, ಎಜೆಎಸ್‌ಯು ಅಭ್ಯರ್ಥಿ ಅವಧೇಶ್ ಯಾದವ್ ಅವರು ತಮ್ಮ ಮಾವ ಜೆವಿಪಿ-ಎಂ ಅಭ್ಯರ್ಥಿ ಯೋಗೇಂದ್ರ ಯಾದವ್ ವಿರುದ್ಧ ಹೋರಾಡುತ್ತಿದ್ದಾರೆ.

ಕಣದಲ್ಲಿರುವ 221 ಹುರಿಯಾಳುಗಳ ಪೈಕಿ 75 ಮಂದಿ ಅಪರಾಧ ಪ್ರಕರಣಗಳಲ್ಲಿ ಷಾಮೀಲಾದ ಆರೋಪ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News