ಪ್ರಧಾನಿಯನ್ನು ಹತಾಶರನ್ನಾಗಿಸಿದ ಜನಾಕ್ರೋಶ

Update: 2019-12-17 19:02 GMT

ತಾವೇ ಸೃಷ್ಟಿಸಿದ ಸಮಸ್ಯೆಯಿಂದ ಭುಗಿಲೆದ್ದ ಜನಾಕ್ರೋಶವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹತಾಶರನ್ನಾಗಿ ಮಾಡಿದೆ. ಮಾಡಲು ಬೇಕಾದಷ್ಟು ಕೆಲಸಗಳಿದ್ದವು. ಜನಸಾಮಾನ್ಯರು ಸಮಸ್ಯೆಗಳ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದಾರೆ. ಬೆಲೆ ಏರಿಕೆ ಜನರನ್ನು ಜರ್ಜರಿತರನ್ನಾಗಿ ಮಾಡಿದೆ. ಈ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ಜನರ ನೆರವಿಗೆ ಧಾವಿಸಬೇಕಾದ ಸರಕಾರ ಕೆಲಸಕ್ಕೆ ಬಾರದ ಆದರೆ ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಪೌರತ್ವ ತಿದ್ದುಪಡಿ ಕಾಯ್ದೆ ತಂದು ಹೊಸ ಬಿಕ್ಕಟ್ಟನ್ನು ನಿರ್ಮಿಸಿಕೊಂಡಿದೆ. ತಮ್ಮ ತಪ್ಪನ್ನು ಮುಚ್ಚಿ ಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಉಂಟಾಗಿರುವ ಅಶಾಂತಿಗೆ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು ಹಾಗೂ ಅರ್ಬನ್ ನಕ್ಸಲೀಯರು ಕಾರಣ ಎಂದು ಆರೋಪ ಮಾಡಿದ್ದಾರೆ.

ಭಾರತದ ಜನ ಪೌರತ್ವ ತಿದ್ದುಪಡಿ ಕಾನೂನು ಬೇಕೆಂದು ಕೇಳಿರಲಿಲ್ಲ.ಜನರಿಗೆ ಬೇಕಿಲ್ಲದ ಕಾನೂನು ತಿದ್ದುಪಡಿಯನ್ನು ಬಿಜೆಪಿ ಸರಕಾರ ತನ್ನ ಹಿತಾಸಕ್ತಿ ರಕ್ಷಣೆಗಾಗಿ ಮಾಡಿಕೊಂಡಿತು. ಇಂತಹ ವಿವಾದಾಸ್ಪದವಾದ ಕಾನೂನು ತಿದ್ದುಪಡಿ ಮಾಡುವ ಮುನ್ನ ಇದರ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟು ಜನಾಭಿಪ್ರಾಯ ಪಡೆಯಬೇಕಾಗಿತ್ತು. ಇಲ್ಲವೇ ಸರ್ವ ಪಕ್ಷಗಳ ನಾಯಕರ ಸಭೆಯನ್ನು ಕರೆದು ಚರ್ಚಿಸಬಹುದಿತ್ತು. ಹಿಂದಿನ ಸರಕಾರಗಳು ಅನೇಕ ಸಂದರ್ಭಗಳಲ್ಲಿ ಹಾಗೆ ಮಾಡಿವೆ. ಆದರೆ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ರಿಮೋಟ್‌ನಿಂದ ನಡೆಯುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ಅದಾವುದನ್ನೂ ಮಾಡದೇ ಬಹುಮತದ ದುರಹಂಕಾರದಿಂದ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆಯಿತು. ಇದರ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕಾಗಿದ್ದ ಪ್ರತಿಪಕ್ಷಗಳು ಆರಂಭದಲ್ಲಿ ತಮ್ಮ ಉಗ್ರ ಆಕ್ರೋಶವನ್ನೇನೂ ವ್ಯಕ್ತಪಡಿಸಲಿಲ್ಲ. ಯಾವಾಗ ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಸಿಡಿದೆದ್ದರೋ ಆಗ ಪ್ರತಿಪಕ್ಷಗಳು ಕೂಡ ಎಚ್ಚೆತ್ತು ಧ್ವನಿಯೆತ್ತಿದವು. ಪ್ರಧಾನಿಯ ನಿರೀಕ್ಷೆಯೇನೆಂದರೆ ಪ್ರತಿಪಕ್ಷಗಳು ಬಾಯಿ ಮುಚ್ಚಿ ಕೊಂಡಿರಬೇಕಾಗಿತ್ತು. ವಿಶ್ವವಿದ್ಯಾನಿಲಯದ ಆವರಣದ ಒಳಗೆ ಕುಲಪತಿಗಳ ಅನುಮತಿ ಇಲ್ಲದೆ ಪೊಲೀಸ್ ವೇಷದ ಕೋಮುವಾದಿ ಗೂಂಡಾಗಳು ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿದರೂ ಪ್ರತಿಪಕ್ಷಗಳು ತೆಪ್ಪಗಿರಬೇಕೆಂಬುದು ಮೋದಿಯವರ ಬಯಕೆಯಾಗಿದೆ.

ಪ್ರತಿಪಕ್ಷಗಳು ದೇಶಕ್ಕೆ ಬೆಂಕಿ ಹಚ್ಚುತ್ತಿವೆ ಎಂದು ಮೋದಿಯವರು ಜಾರ್ಖಂಡ್ ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪಿಸಿದ್ದಾರೆ. ಅವರ ಮಾತಿನಲ್ಲಿ ಹತಾಶೆ ಎದ್ದು ಕಾಣುತ್ತಿದೆ. ಪ್ರಧಾನಿಯ ಬಳಿ ಗುಪ್ತಚರ ದಳವೇ ಇದೆ. ಪ್ರತಿಪಕ್ಷಗಳು, ಅರ್ಬನ್ ನಕ್ಸಲರು ಬೆಂಕಿ ಹಚ್ಚುತ್ತಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಇಂತಹ ಸೂಕ್ಷ್ಮ ವಿಷಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಅವರ ಹತಾಶೆಗೆ ಸಾಕ್ಷಿಯಾಗಿದೆ. ಒಂದೆಡೆ ಪೊಲೀಸ್ ಬಲ ಬಳಸಿ ವಿದ್ಯಾರ್ಥಿಗಳನ್ನು ಹತ್ತಿಕ್ಕುವುದು, ಇನ್ನೊಂದು ಕಡೆ ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸುವುದು ನುಣುಚಿಕೊಳ್ಳುವ ಯತ್ನವಲ್ಲದೆ ಬೇರೇನೂ ಅಲ್ಲ.

ಕಳೆದ ಮೂರು ದಶಕಗಳಿಂದ ದೇಶದಲ್ಲಿ ಯಾರು ಅಶಾಂತಿ ಮೂಡಿಸುತ್ತಿದ್ದಾರೆ, ಯಾರು ಬೆಂಕಿ ಹಚ್ಚುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಿಂದುಳಿದ ವರ್ಗಗಳಿಗೆ ಮೀಸಲು ಸೌಕರ್ಯ ನೀಡುವ ಮಂಡಲ್ ಆಯೋಗದ ವರದಿ ವಿರುದ್ಧ ನಡೆದ ಹಿಂಸಾಚಾರ, ಆನಂತರ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದಾಗ ದೇಶಾದ್ಯಂತ ನಡೆದ ಗಲಭೆ, ಕೋಲಾಹಲ, ರಕ್ತಪಾತಗಳಿಗೆ ಯಾರು ಕಾರಣ ಎಂದು ಇಡೀ ದೇಶಕ್ಕೆ ಗೊತ್ತಿದೆ. ಗುಜರಾತ್ ಹತ್ಯಾಕಾಂಡದ ರೂವಾರಿ ಯಾರೆಂಬುದು ಹಗಲಿನಷ್ಟು ನಿಚ್ಚಳವಾಗಿದೆ. ಬೇಕಿದ್ದರೆ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳಲಿ.

ಬಿಜೆಪಿಯ ಕಳೆದ ಆರು ವರ್ಷಗಳ ಆಡಳಿತದ ಪರಿಣಾಮವಾಗಿ ದೇಶ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಸರಕಾರಿ ಬ್ಯಾಂಕುಗಳ ದುರವಸ್ಥೆ ಹೀಗೆ ಈ ಸರಕಾರದ ನಡೆಯಿಂದ ಜನ ರೋಸಿ ಹೋಗಿದ್ದಾರೆ. ಅದರ ಪರಿಣಾಮವಾಗಿ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾ, ದಿಲ್ಲಿ ಮುಂತಾದ ಕಡೆ ಬಿಜೆಪಿ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿದೆ, ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಲು ಹೊರಟ ಬಿಜೆಪಿ ತಾನೇ ಮುಕ್ತವಾಗುವತ್ತ ದಾಪುಗಾಲಿಡುತ್ತಿದೆ. ಅಯೋಧ್ಯೆಯ ವಿವಾದ ಇತ್ಯರ್ಥವಾದ ನಂತರ ಜನಸಾಮಾನ್ಯರನ್ನು ಭಾವನೆಯ ಅಲೆಯಲ್ಲಿ ತೇಲಿ ಬಿಡಲು ಬಿಜೆಪಿಗೆ ವಿಷಯಗಳೇ ಇರಲಿಲ್ಲ. ಅದಕ್ಕಾಗಿ ಪೌರತ್ವ ತಿದ್ದುಪಡಿ ವಿಧೇಯಕ ತಂದು ದೇಶದ ಶಾಂತಿ, ನೆಮ್ಮದಿಗೆ ಬೆಂಕಿ ಹಚ್ಚಿತು. ಈಗ ಅದರಿಂದ ಹೊರಬರಲಾಗದೆ ಪ್ರತಿಪಕ್ಷಗಳ ತಲೆಗೆ ಅದನ್ನು ಕಟ್ಟಲು ಹೊರಟಿದೆ.

ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಈ ರೀತಿ ಮಾತಾಡಿದರೆ ಅವರ ಗೃಹಮಂತ್ರಿ ಅಮಿತ್ ಶಾ ಅಯೋಧ್ಯೆಯಲ್ಲಿ ನಾಲ್ಕು ತಿಂಗಳಲ್ಲಿ ರಾಮ ಮಂದಿರ ಕಟ್ಟುವುದಾಗಿ ಹೇಳುತ್ತಾರೆ. ದೇಶ ಕಟ್ಟುವ ಹೊಣೆ ಹೊತ್ತವರು ಅದಕ್ಕೆ ತಿಲಾಂಜಲಿ ನೀಡಿ ವಿವಾದಕ್ಕೆ ಸಂಬಂಧವಿಲ್ಲದ ಜಾರ್ಖಂಡ್‌ನ ಸಭೆಯೊಂದರಲ್ಲಿ ಮಂದಿರ ಕಟ್ಟುವ ಮಾತನ್ನಾಡುತ್ತಾರೆ. ಜನರ ಬಳಿ ಹೇಳಿಕೊಳ್ಳುವಂಥ ಇಂಥವರ ಮಾತುಗಳು ಬಂಡವಾಳವಿಲ್ಲದ ಬಡಾಯಿ ಅಲ್ಲದೆ ಬೇರೇನೂ ಅಲ್ಲ. ದಟ್ಟ ಹತಾಶೆ ಇವರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News