ಪ್ರೊಫೆಸರ್‌ ಜಾತಿ ತಾರತಮ್ಯ ತೋರುತ್ತಿರುವ ಆರೋಪ : ಪ್ರತಿಭಟನೆ ನಡೆಸಿದ 23 ವಿದ್ಯಾರ್ಥಿಗಳು ಡಿಬಾರ್

Update: 2019-12-18 04:25 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಜಾತಿ ತಾರತಮ್ಯ ತೋರುತ್ತಿರುವ ಇಬ್ಬರು ಪ್ರೊಫೆಸರ್‌ಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಮಖನ್‌ಲಾಲ್ ಚತುರ್ವೇದಿ ನ್ಯಾಷನಲ್ ಯುನಿವರ್ಸಿಟಿ ಆಫ್ ಜರ್ನಲಿಸಂ ಆ್ಯಂಡ್ ಕಮ್ಯುನಿಕೇಶನ್ಸ್‌ನ 23 ವಿದ್ಯಾರ್ಥಿಗಳನ್ನು ವಿವಿ ಡಿಬಾರ್ ಮಾಡಿದೆ.

ವಿವಿಯ ಶಿಸ್ತು ಸಮಿತಿ ಶಿಫಾರಸ್ಸಿನ ಅನ್ವಯ ಮುಂದಿನ ಆದೇಶದವರೆಗೆ 23 ವಿದ್ಯಾರ್ಥಿಗಳನ್ನು ಉಚ್ಚಾಟಿಸಲಾಗಿದೆ ಎಂದು ಉಸ್ತುವಾರಿ ಕುಲಸಚಿವ ದೀಪೇಂದ್ರ ಸಿಂಗ್ ಬಘೇಲ್ ಹೇಳಿದ್ದಾರೆ.

ಉಚ್ಚಾಟಿತ ವಿದ್ಯಾರ್ಥಿಗಳ ಪೈಕಿ 11 ಮಂದಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಎಂಟು ಮಂದಿ ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದವರು. ವಿವಿ ಪ್ರೊಫೆಸರ್‌ಗಳಾದ ದಿಲೀಲ್ ಮಂಡಲ್ ಮತ್ತು ಮುಕೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ, ತರಗತಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಜಾತಿ ತಾರತಮ್ಯ ತೋರುತ್ತಿದ್ದಾರೆ ಎಂದು ಆಪಾದಿಸಿ ಈ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಡಿ. 13ರಂದು ಪೊಲೀಸರು ಕ್ಯಾಂಪಸ್ ಪ್ರವೇಶಿಸಿ, ಕುಲಪತಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಅದೇ ದಿನ ಸಂಜೆ ಕ್ಯಾಂಪಸ್‌ನಲ್ಲಿ ಹಿಂಸಾಚಾರ ಸಂಭವಿಸಿತ್ತು. ಪ್ರತಿಭಟನಾ ನಿರತರ ಪೈಕಿ 10 ಮಂದಿಯ ವಿರುದ್ಧ ಡಿ. 14ರಂದು ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ಶಿಸ್ತು ಸಮಿತಿಗೆ ಸೂಚಿಸಲಾಗಿತ್ತು.

ಪ್ರತಿಭಟನಾನಿರತರು ತಮ್ಮ ಪ್ರತಿಭಟನೆ ನಿಷ್ಪಕ್ಷಪಾತ ಎಂದು ಹೇಳಿಕೊಂಡಿದ್ದರೂ, ಪ್ರತಿಭಟನಾಕಾರರಿಗೆ ಬಿಜೆಪಿ ಹಾಗೂ ಆರೆಸ್ಸೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರೊಫೆಸರ್‌ಗಳ ಪರ ಇರುವ ವಿದ್ಯಾರ್ಥಿಗಳ ಗುಂಪು ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News