ಖ್ಯಾತ ಮರಾಠಿ ನಟ ಡಾ. ಶ್ರೀರಾಮ್ ಲಗೂ ನಿಧನ

Update: 2019-12-18 05:45 GMT

ಪುಣೆ: ಖ್ಯಾತ ರಂಗಕರ್ಮಿ ಮತ್ತು ಚಿತ್ರನಟ ಡಾ.ಶ್ರೀರಾಮ್ ಲಗೂ ಮಂಗಳವಾರ ಸಂಜೆ ಪುಣೆಯ ದೀನನಾಥ್ ಮಂಗೇಷ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 92 ವರ್ಷ ವಯಸ್ಸಿನ ಲಗೂ ವಯೋಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ವೃತ್ತಿಯಲ್ಲಿ ವೈದ್ಯರಾಗಿದ್ದ ಲಗೂ, ಪತ್ನಿ ದೀಪಾ, ಮಗ ಡಾ.ಆನಂದ ಲಗೂ ಹಾಗೂ ಪುತ್ರಿ ಡಾ. ಬಿಂಬಾ ಕಾನಿಟ್ಕರ್ ಅವರನ್ನು ಅಗಲಿದ್ದಾರೆ. ಇವರ ಮತ್ತೊಬ್ಬ ಮಗ ತನ್ವೀರ್ ರೈಲು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇಎನ್‌ಟಿ ಸರ್ಜನ್ ಆಗಿದ್ದ ಲಗೂ, ವಿಜಯ್ ತೆಂಡೂಲ್ಕರ್, ವಿಜಯ ಮೆಹ್ತಾ ಮತ್ತು ಅರವಿಂದ್ ದೇಶಪಾಂಡೆ ಜತೆ ಸೇರಿ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯೋತ್ತರ ರಂಗ ಚಳವಳಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1927ರ ನವೆಂಬರ್ 16ರಂದು ಸತಾರಾದಲ್ಲಿ ಜನಿಸಿದ ಇವರು, ಬಿಜೆ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗಲೇ ನಾಟಕದ ಹುಚ್ಚು ಬೆಳೆಸಿಕೊಂಡಿದ್ದರು.

ಭಾಲ್ಬ ಕೇಳ್ಕರ್ ಜತೆ ಸೇರಿ ಪ್ರಗತಿಪರ ಪ್ರಜಾಸತ್ತಾತ್ಮಕ ಸಂಘ (ಪಿಡಿಎ) ವನ್ನು 1969ರಲ್ಲಿ ಆರಂಭಿಸಿ, ಮರಾಠಿ ರಂಗಭೂಮಿಯಲ್ಲಿ ಪೂರ್ಣಾವಧಿ ನಟರಾಗಿ ಸೇವೆ ಆರಂಭಿಸಿದರು. ವಸಂತ್ ಕಾನಿಟ್ಕರ್ ಅವರ ಇತೇ ಒಶಲಾಲ ಮೃತ್ಯು ನಾಟಕದಲ್ಲಿ ನಟಿಸುವ ಮೂಲಕ ವೃತ್ತಿರಂಗಭೂಮಿ ಪ್ರವೇಶಿಸಿದರು.

ನಟಸಾಮ್ರಾಟ, ಹಿಮಾಲಯಾಚಿ ಸವೋಲಿಯಂಥ ನಾಟಕ ಹಾಗೂ ಪಿಂಜ್ರಾ ಚಲನಚಿತ್ರಗಳು ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ಏಕ್ ದಿನ್ ಅಚಾನಕ್, ಘರೋಂಡಾ ಮತ್ತು ಲವರೀಸ್‌ನಂಥ ಹಿಂದಿ ಚಿತ್ರಗಳಲ್ಲೂ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು.

ರಂಗಭೂಮಿಯಲ್ಲಿ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದ ಲಗೂ, ತಮ್ಮ ಪ್ರಗತಿಪರ ಹಾಗೂ ವಿಚಾರವಾದಿ ಅಭಿಪ್ರಾಯಗಳಿಗೆ ಹೆಸರಾಗಿದ್ದರು. ನಿರ್ಭೀತಿಯಿಂದ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸುತ್ತಿದ್ದರು.

ಚಿತ್ರ ನಿರ್ದೇಶಕ ಡಾ. ಜಬ್ಬಾರ್ ಪಟೇಲ್, ರಂಗಕರ್ಮಿ ಸತೀಶ್ ಅಲೇಕರ್, ನಟ ಡಾ.ಮೋಹನ್ ಅಗ್ಶೆ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಹಲವು ಮಂದಿ ಗಣ್ಯರು, ಲಗೂ ನಿಧನಕ್ಕೆ ಸಂತಾಪ ಸೂಚಿಸಿ, "ಲಗೂ ರಂಗಭೂಮಿಯ ದಂತಕಥೆಯಂತಿದ್ದರು" ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News