ಅಸಂವಿಧಾನಿಕ ಪೌರತ್ವ ಕಾಯ್ದೆ ವಿರುದ್ಧ ದೇಶದೆಲ್ಲೆಡೆ ಹೋರಾಟ: ಡಿ.ಕೆ.ಶಿವಕುಮಾರ್

Update: 2019-12-18 12:11 GMT

ಬೆಂಗಳೂರು, ಡಿ. 18: ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಕೇಂದ್ರ ಸರಕಾರ ಎಲ್ಲ ವರ್ಗ, ಜಾತಿ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೇ ಹೊರತು ಯಾವುದೇ ವರ್ಗ, ಧರ್ಮದವರನ್ನು ಗುರಿಯಾಗಿಸಬಾರದು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಹಿತಾಸಕ್ತಿ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಹೀಗಾಗಿ ಇದೊಂದು ಅಸಂವಿಧಾನಿಕ ಕಾಯ್ದೆ. ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಯಾವುದೇ ಪ್ರಜೆ ತಾನು ಪ್ರಾರ್ಥನೆ ಮಾಡುವ ದೇವರನ್ನು, ಪಾಲಿಸುವ ಧರ್ಮವನ್ನು ಆಯ್ಕೆ ಮಾಡುವುದು ಆತನ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಪ್ರಜೆಗಳಿಗೆ ಸಂವಿಧಾನದ ಮೂಲಭೂತ ಹಕ್ಕಿನ ಅಡಿಯಲ್ಲಿ ಈ ಸ್ವಾತಂತ್ರ್ಯ ನೀಡಲಾಗಿದೆ. ಹೀಗಾಗಿ ಸರಕಾರ ಆಗಲಿ, ಯಾವುದೇ ಪಕ್ಷವಾಗಲಿ ದೇಶದ ಜನರನ್ನು ಇಂತಹುದೇ ಧರ್ಮವನ್ನು ಪಾಲಿಸುವಂತೆ ಬಲವಂತ ಹೇರುವಂತಿಲ್ಲ. ಹೀಗಾಗಿ ಕೇಂದ್ರ ಸರಕಾರದ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ನಾಚಿಕೆಗೇಡಿನ ವಿಚಾರ ಎಂದು ಟೀಕಿಸಿದರು.

ಅಸ್ಸಾಂ ಹಾಗೂ ಇತರೆ ಭಾಗಗಳಲ್ಲಿ ಅಂತರ್ಜಾಲ ಸೌಕರ್ಯವನ್ನು ಕಡಿತಗೊಳಿಸಿ ಪ್ರಧಾನಿಗಳು ಶಾಂತಿ ಕಾಪಾಡುವಂತೆ ಅಂತರ್ಜಾಲದಲ್ಲಿ ಸಂದೇಶ ರವಾನಿಸುತ್ತಾರೆ. ಈ ಸಂದೇಶ ಅವರಿಗೆ ಹೇಗೆ ತಲುಪುತ್ತದೆ? ನನ್ನ ಪ್ರಕಾರ ದೇಶದ ಪ್ರತಿಯೊಬ್ಬರಿಗೂ ತಮ್ಮ ಪ್ರತಿಭಟನೆ ಮಾಡುವ ಅಧಿಕಾರವಿದೆ. ಸಾಮಾನ್ಯ ಪ್ರಜೆ ತನ್ನ ಧ್ವನಿಯನ್ನು ಎತ್ತುವುದೇ ಈ ಸಂದರ್ಭದಲ್ಲಿ ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ ಎಂದರು.

ಬಿಜೆಪಿ ಸರಕಾರಕ್ಕೆ ಬಹುಮತವಿದೆ ನಿಜ. ಆ ಸರಕಾರ ಸಮಾಜದ ಎಲ್ಲ ವರ್ಗಗಳಿಗೂ ನೆರವಾಗಬೇಕು. ಕೇವಲ ಒಂದು ವರ್ಗ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಬಾರದು. ಹೀಗಾಗಿ ಕೇಂದ್ರದ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ದೇಶದೆಲ್ಲೆಡೆ ಹಾಗೂ ರಾಜ್ಯದಲ್ಲೂ ನಾವು ನಮ್ಮ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News