ಪೌರತ್ವ ಕಾಯ್ದೆಯನ್ನು ಭಾರತೀಯರೆಲ್ಲರೂ ಒಟ್ಟಾಗಿ ವಿರೋಧಿಸೋಣ: ರಂಗಕರ್ಮಿ ಪ್ರಸನ್ನ

Update: 2019-12-18 12:13 GMT

ಬೆಂಗಳೂರು, ಡಿ. 18: ‘ದೇಶದ ಸಂವಿದಾನದ ಆಶಯಕ್ಕೆ ವ್ಯತಿರಿಕ್ತವಾಗಿರುವ, ಹಾಗೂ ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ, ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಗೆ ಅರ್ಹವಾಗಿದೆ’ ಎಂದು ರಂಗಕರ್ಮಿ ಪ್ರಸನ್ನ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಭಾರತೀಯ ಪ್ರಜೆಗಳ ನಡುವೆಯೇ ಭಿನ್ನಾಭಿಪ್ರಾಯ ಎಣಿಸುವ ಈ ಕಾನೂನು ಭಾರತದ ಏಕತೆಗೆ ಮಾರಕವಾದದ್ದಾಗಿದೆ. ಎಲ್ಲ ಭಾರತೀಯ ಪ್ರಜೆಗಳೂ, ಜಾತಿ- ಮತಗಳ ಭೇದ-ಭಾವವನ್ನು ಮರೆತು, ಈ ಕಾನೂನನ್ನು ವಿರೋಧಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಭಾರತೀಯ ಮುಸಲ್ಮಾನರೂ ಈ ದೇಶದ ಪ್ರಜೆಗಳೇ ಆಗಿದ್ದಾರೆ. ಅವರನ್ನು ಅವಮಾನಿಸಿದರೆ, ಅಥವಾ ಈಶಾನ್ಯ ರಾಜ್ಯಗಳ ಗುಡ್ಡಗಾಡು ಜನರ ಸಂಸ್ಕೃತಿಯ ಮೇಲೆ ಅನಗತ್ಯ ಒತ್ತಡ ಹೇರಿದರೆ, ಅಥವಾ ಪಶ್ಚಿಮ ಬಂಗಾಳದ ಜನರನ್ನು ಅವರು ಪೂರ್ವ ಬಂಗಾಳದವರೇ ಪಶ್ಚಿಮ ಬಂಗಾಳದವರೇ ಎಂಬ ಅನಗತ್ಯ ಸಂಶಯ ದೃಷ್ಟಿಯಿಂದ ನೋಡಿದರೆ, ಅಥವಾ ನೇಪಾಳದ ಹಿಂದೂ ನಿರಾಶ್ರಿತರು ಶ್ರೀಲಂಕಾದ ಹಿಂದೂ ನಿರಾಶ್ರಿತರು ಭಾರತದಲ್ಲಿ ಆಸರೆ ಪಡೆಯಲಿಕ್ಕೆ ಅರ್ಹರಲ್ಲ ಎಂದು ಪರಿಗಣಿಸಿದರೆ, ಅಂತಹ ಕಾನೂನು ಭಾರತೀಯ ಕಾನೂನು ಹೇಗೆ ತಾನೇ ಆದೀತು? ಎಂದು ಅವರು ಪ್ರಶ್ನಿಸಿದ್ದಾರೆ.

ಇಂತಹ ಕಾನೂನನ್ನು ಬೆಂಬಲಿಸಿ ಎಂದು ಭಾರತೀಯ ಹಿಂದೂಗಳನ್ನು ಪ್ರಚೋದಿಸುತ್ತಿರುವ ಆಳುವ ಪಕ್ಷವು ಭಾರತದ ಏಕತೆಗೆ ಧಕ್ಕೆತರುತ್ತದೆ. ಇಂತಹ ಕಾನೂನು ಒಂದನ್ನು ಬೆಂಬಲಿಸುವ ಮೂಲಕ ಭಾರತೀಯ ಹಿಂದೂ ಜನಾಂಗಗಳ ಘನತೆ ಕುಂಠಿತವಾದೀತೇ ಹೊರತು ಹೆಚ್ಚಲಾರದು ಎಂದು ಪ್ರಸನ್ನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News