ಎವರೆಸ್ಟ್‌ನಲ್ಲಿ ನೂಕುನುಗ್ಗಲು ತಪ್ಪಿಸಲು ನೇಪಾಳದಿಂದ ಹೊಸ ಪ್ರಸ್ತಾವಗಳು

Update: 2019-12-18 15:18 GMT

ಕಠ್ಮಂಡು (ನೇಪಾಳ), ಡಿ. 18: ಮೌಂಟ್ ಎವರೆಸ್ಟ್ ಆರೋಹಿಗಳಿಗೆ ನೀಡಲಾಗುವ ಪರವಾನಿಗೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ನೇಪಾಳ ಸರಕಾರ ಕೆಲವು ಬದಲಾವಣೆಗಳನ್ನು ಮಾಡಲು ಉದ್ದೇಶಿಸಿದೆ. ಈ ವರ್ಷದ ಎವರೆಸ್ಟ್ ಶಿಖರವೇರಲು ಬಂದಿದ್ದ ಆರೋಹಿಗಳ ಪೈಕಿ 11 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಅದು ಈ ಕ್ರಮವನ್ನು ತೆಗೆದುಕೊಂಡಿದೆ.

ನೂತನ ಪ್ರಸ್ತಾವಗಳ ಪ್ರಕಾರ, ನೇಪಾಳದಲ್ಲಿ ಕನಿಷ್ಠ 6,500 ಮೀಟರ್ ಎತ್ತರದ ಕನಿಷ್ಠ ಒಂದು ಪರ್ವತವನ್ನು ಹತ್ತಿರುವುದಕ್ಕೆ ಆಕಾಂಕ್ಷಿಗಳು ದಾಖಲೆಗಳನ್ನು ಸಲ್ಲಿಸಬೇಕು. ಆಕಾಂಕ್ಷಿ ಆರೋಹಿಗಳು ಉತ್ತಮ ಆರೋಗ್ಯವನ್ನು ಹೊಂದಿರುವ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಅತಿ ಎತ್ತರದ ಪರ್ವತಾರೋಹಣಗಳನ್ನು ಸಂಘಟಿಸುವ ಮಾರ್ಗದರ್ಶಿಗಳು ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.

ಕಳೆದ ಆರೋಹಣ ಋತುವಿನಲ್ಲಿ ಮೌಂಟ್ ಎವರೆಸ್ಟ್‌ನಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಒಂಬತ್ತು ಮಂದಿ ನೇಪಾಳ ಭಾಗದಲ್ಲಿ ಸಾವಿಗೀಡಾದರೆ, ಇಬ್ಬರು ಟಿಬೆಟ್ ಭಾಗದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

 ಮೇ ತಿಂಗಳ ಉತ್ತರಾರ್ಧದಲ್ಲಿ, ಎವರೆಸ್ಟ್ ಆರೋಹಣಕ್ಕೆ ಪ್ರಶಸ್ತವಾದ ವಾತಾವರಣ ಏರ್ಪಟ್ಟಾಗ, ಸೂಕ್ತ ಹವಾಮಾನಕ್ಕಾಗಿ ಸುದೀರ್ಘ ಅವಧಿಯಿಂದ ಕಾಯುತ್ತಿದ್ದ ಆರೋಹಿಗಳು ಧಾವಿಸಿಹೋಗಿದ್ದರು. ಇದರಿಂದಾಗಿ ‘ಟ್ರಾಫಿಕ್ ಜಾಮ್’ ಸಂಬಂಧಿಸಿದ್ದು ಹಲವು ಆರೋಹಿಗಳು ಬಳಲಿಕೆ ಮತ್ತು ನಿತ್ರಾಣದಿಂದ ಪ್ರಾಣ ಕಳೆದುಕೊಂಡಿದ್ದರು.

ಪ್ರಸ್ತಾವಗಳ ಪರಿಣಾಮದ ಬಗ್ಗೆ ಅನುಭವಿಗಳಿಂದ ಸಂದೇಹ

ಆರೋಹಣ ಪರವಾನಿಗೆ ನೀಡಲು ನೇಪಾಳ ಸರಕಾರ ಮಂಡಿಸಿರುವ ಪ್ರಸ್ತಾವಗಳು, ಈ ವರ್ಷ ಮೌಂಟ್ ಎವರೆಸ್ಟ್‌ನಲ್ಲಿ ಸಂಭವಿಸಿದ ಗರಿಷ್ಠ ಸಾವುಗಳಿಗೆ ಕಾರಣವಾದ ಅಂಶಗಳನ್ನು ನಿಭಾಯಿಸುವ ಬಗ್ಗೆ ಮೌಂಟ್ ಎವರೆಸ್ಟ್‌ನ ಹಿರಿಯ ಆರೋಹಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ.

ಈ ಪ್ರಸ್ತಾವಗಳು 8,850 ಮೀಟರ್ ಎತ್ತರದ ಹಿಮಾಲಯ ಶೃಂಗವನ್ನು ಏರಲು ತಂಡಗಳಲ್ಲಿ ಧಾವಿಸಿಬರುತ್ತಿರುವ ಅನನುಭವಿ ಆರೋಹಿಗಳನ್ನು ತಡೆಯುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಪರ್ವತಾರೋಹಿಗಳಾದ ಎಡ್ ವೀಸ್ಚರ್ಸ್ ಮತ್ತು ಅಲನ್ ಆ್ಯರ್ನೆಟ್ ಹೇಳಿದ್ದಾರೆ.

 ‘‘ಈ ನಾಟಕವನ್ನು ನಾನು ಹಲವು ಬಾರಿ ನೋಡಿದ್ದೇನೆ. ಈ ಬಾರಿಯೂ ಇದರ ಭವಿಷ್ಯವನ್ನು ಮುಂಚಿತವಾಗಿಯೇ ಊಹಿಸಬಹುದಾಗಿದೆ. 2013ರ ಬಳಿಕ ಪ್ರತಿ ವರ್ಷ ಏನಾದರೂ ಎಡವಟ್ಟುಗಳು ನಡೆಯುತ್ತಲೇ ಇವೆ ಹಾಗೂ ಅವರು (ನೇಪಾಳ ಸರಕಾರ) ಪ್ರತಿ ಬಾರಿಯೂ ಈ ಹೊಸ ನಿಯಮಗಳನ್ನು ಘೋಷಿಸುತ್ತಲೇ ಇದ್ದಾರೆ. ಆದರೆ, ಯಾವತ್ತೂ ಜಾರಿಗೊಳಿಸಿಲ್ಲ’’ ಎಂದು ಮಂಗಳವಾರ ‘ರಾಯ್ಟರ್ಸ್’ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆ್ಯರ್ನೆಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News