ದಲಿತ ಲೋಕದ ಕಥೆಗಳು

Update: 2019-12-18 18:32 GMT

ಲಿತ ಸಾಹಿತ್ಯ ಸಂಪುಟಗಳ ಪ್ರಕಟನೆಯ ಭಾಗವಾಗಿ ಕನ್ನಡ ಸಾಹಿತ್ಯ ಪರಿಷತ್ ‘ದಲಿತ ಸಾಹಿತ್ಯ ಸಂಪುಟ-ಸಣ್ಣ ಕಥೆ’ಯನ್ನು ಹೊರತಂದಿದೆ. ಡಾ. ಸಣ್ಣರಾಮ ಅವರು ಇದರ ಸಂಪಾದಕರಾಗಿದ್ದಾರೆ. ‘‘...ಆಧುನಿಕ ಕಾಲದಲ್ಲಿ ದಲಿತ ಲೇಖಕರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು ತಡವಾಗಿಯೇ. ಅಂದರೆ ಎಂಬತ್ತರ ದಶಕದಲ್ಲಿ. ಆದರೂ ಈ ಅಲ್ಪ ಅವಧಿಯಲ್ಲಿ ಸಾಧಿಸಿದ್ದು ನಿರೀಕ್ಷೆಗೂ ಮೀರಿದ್ದು. ಮೊದಲ ಹಂತದ ಕಥೆಗಾರರಾದ ದೇವನೂರ ಮಹಾದೇವ ಅವರು ತಮ್ಮ ಕಥೆಗಳ ಮೂಲಕ ದಲಿತ ಕೇರಿಯ ಅನುಭವಗಳನ್ನು ತೆರೆದಿಟ್ಟಾಗ ಕನ್ನಡ ಸಾಹಿತ್ಯವೇ ತಲ್ಲಣಗೊಂಡಿತು. ದಲಿತ, ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ದಲಿತ ಬಹುಸಮುದಾಯದ ಕಥೆಗಾರರು ಕಡೆಗಣಿಸಲ್ಪಟ್ಟ ಬಹುಸಂಸ್ಕೃತಿಯ ಬದುಕಿನ ವಿವಿಧ ಸ್ತರಗಳನ್ನು ತೆರೆದಿಟ್ಟಿದ್ದಾರೆ.....’’ ಎಂದು ಸಂಪಾದಕರು ಬರೆಯುತ್ತಾರೆ. ಇಲ್ಲಿ, ವಿವಿಧ ಕಥೆಗಳು ಪರೋಕ್ಷವಾಗಿ ದಲಿತರ ಬದುಕು, ಬವಣೆಗಳನ್ನೇ ತೆರೆದಿಡುತ್ತವೆ. ಎಲ್ಲ ಕಥೆಗಳ ಕೇಂದ್ರ ದ್ರವ್ಯ ಶೋಷಣೆಯೇ ಆಗಿದೆ. ಎಲ್ಲ ಶೋಷಣೆಗಳ ಮಧ್ಯೆಯೂ ದಲಿತರ ಬದುಕಿನೊಳಗಿರುವ ಜೀವನ ಸೌಂದರ್ಯವನ್ನು ಆರಿಸುವ ಅಥವಾ ಗುರುತಿಸುವ ಕೆಲಸ ಸಣ್ಣದೇನೂ ಅಲ್ಲ. ಅಂತಹ ಸೂಕ್ಷ್ಮ ಕುಸುರಿ ಕೆಲಸವನ್ನು ಹಲವು ದಲಿತ ಕಥೆಗಾರರು ಮಾಡಿದ್ದಾರೆ. ದಲಿತೇತರ ಕಥೆಗಾರರು ದಲಿತರ ಕುರಿತ ಕಥೆಗಳನ್ನು ಬರೆಯುವುದಕ್ಕೂ, ದಲಿತರೇ ತಮ್ಮ ಬದುಕಿನ ಕಥೆಯನ್ನು ಬರೆಯುವುದಕ್ಕೂ ಇರುವ ವ್ಯತ್ಯಾಸಗಳನ್ನು ಈ ಮೂಲಕ ಗುರುತಿಸಬಹುದಾಗಿದೆ.

 ‘ಅಮಾಸ’ ಕಥೆಯಿಂದ ಈ ಕೃತಿ ತೆರೆದುಕೊಳ್ಳುತ್ತದೆ. ದೇವನೂರರ ಬಹುಜನಪ್ರಿಯ ಕಥೆ ಇದು. ಬಹುಶಃ ಕಥಾಲೋಕದಲ್ಲಿ ದೇವನೂರು ಒಂದು ಹೊಸ ಭಾಷೆಯನ್ನು ನಿರ್ಮಿಸಿದರು. ಕನ್ನಡ ತನ್ನ ಎದೆಯನ್ನು ಮುಟ್ಟಿನೋಡುವ ಭಾಷೆ ಅದು. ಗ್ರಾಂಥಿಕ ಭಾಷೆ ಮೊದಲ ಬಾರಿಗೆ ಕೀಳರಿಮೆ ಅನುಭವಿಸಿದ್ದು, ದೇವನೂರು ಪರಿಚಯಿಸಿದ ದಲಿತರ ಕನ್ನಡ ಭಾಷೆಯನ್ನು ಎದುರುಗೊಂಡಾಗ. ಅಮಾಸ ಕಥೆಯನ್ನು ಓದಿದಾಗ, ದೇವನೂರು ಭಾಷೆಯ ಶಕ್ತಿಯ ಪರಿಚಯವಾಗುತ್ತದೆ. ಉಳಿದಂತೆ ಬರಗೂರು, ಬಿ.ಟಿ.ಲಲಿತಾನಾಯಕ್, ಮೂಡ್ನಾಕೂಡು, ಮ.ನ. ಜವರಯ್ಯ, ಬಿ. ಟಿ. ಜಾಹ್ನವಿ, ಸಣ್ಣರಾಮ, ಮೊದಲಾದವರ ಕಥೆಗಳಿವೆ. ಹಿರಿ-ಕಿರಿಯ ದಲಿತ ಕಥೆಗಾರರು ಈ ಸಂಕಲನದಲ್ಲಿ ಜೊತೆ ಸೇರಿದ್ದಾರೆ. ಕಿರಿಯ ಕಥೆಗಾರರು, ಇನ್ನಷ್ಟು ಭಿನ್ನವಾದ ದಲಿತ ಲೋಕವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ದಲಿತರ ಲೋಕದಲ್ಲಿ ದಲಿತ ಮಹಿಳೆಯರ ಬದುಕು ಇನ್ನಷ್ಟು ಅಸಹನೀಯವಾದುದು. ಆಕೆ ದಲಿತ ಎಂಬ ಕಾರಣಕ್ಕಾಗಿಯೂ, ಮಹಿಳೆ ಎಂಬ ಕಾರಣಕ್ಕಾಗಿಯೂ ಶೋಷಣೆಗೆ ಒಳಗಾಗಬೇಕಾಗುತ್ತದೆ. ಇಲ್ಲಿರುವ ದಲಿತ ಮಹಿಳಾ ಕಥೆಗಾರರು ಮಹಿಳೆಯ ಒಳ ಧ್ವನಿಯನ್ನು ವ್ಯಕ್ತಗೊಳಿಸಿದ್ದಾರೆ. ಒಟ್ಟು 29 ಕಥೆಗಳು ಇಲ್ಲಿವೆ.

266 ಪುಟಗಳ ಈ ಕೃತಿಯ ಮುಖಬೆಲೆ 320 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News