ಅಂತರಂಗದ ಕಸಗುಡಿಸುವ ಪೊರಕೆ

Update: 2019-12-19 18:57 GMT

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ

ತನುವಿನಲಿ ಹುಸಿ ತುಂಬಿ

ಮನದೊಳಗೆ ವಿಷಯ ತುಂಬಿ

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ

ಕೂಡಲ ಸಂಗಮದೇವ.

-ಬಸವಣ್ಣ

ವಚನಕಾರರ ವಿವೇಕದ ಮೇಲ್ಕಂಡ ಸಾಲುಗಳಲ್ಲಿ ಅಂತರಂಗದ ಕಸ ಗುಡಿಸುವ ಸಾಹಿತ್ಯ ಎನ್ನುವ ಸ್ವಚ್ಛಮಾಡುವ ಪರಿಕರ ನಮಗೆ ದೊರಕುತ್ತದೆ. ಸಾಹಿತ್ಯ ಎನ್ನುವ ಮಾತಿಗೆ ಹೃದ್ಯವಾದದ್ದು ಎಂಬ ಮಾತಿದೆ. ಹೃದಯದ ಜಲದಲ್ಲಿ ಸಮಾಜದ ಕೊಳೆಯನ್ನು ತೊಳೆದು ದರ್ಪಣದಂತೆ ತಿಳಿಯಾಗಿಸಿ ಸಮಸಮಾಜದ ನೆಲೆಯಲ್ಲಿ ನಾವು ಬದುಕಬೇಕಾಗುತ್ತದೆ. ಸಾಹಿತ್ಯವು ಸದಾ ಹೃದಯದ ಜಲವನ್ನು ಮತ್ತೆ ಮತ್ತೆ ತಿಳಿಯಾಗಿಸಬೇಕಾಗುತ್ತದೆ. ಕವಿಮಿತ್ರ ಸಿ.ಶಂಕರ ಅಂಕನಶೆಟ್ಟಿ ಪುರ ಅವರ ಪೊರಕೆ ಕವನ ಸಂಕಲನ ‘ಇದು ಸ್ವಚ್ಛಗಾರರ ಸಂಗಾತಿ’ ಎನ್ನುವ ಅಡಿಬರಹದೊಂದಿಗೆ ತೆರೆದುಕೊಂಡಿದೆ. ಈ ಕವನ ಸಂಕಲನವೂ ಸಹ ಬಾಹ್ಯ ಜಗತ್ತಿನ ಕಸವನ್ನು ಪೊರಕೆಯಿಂದ ಗುಡಿಸಿ ಕಲ್ಮಶವನ್ನು ತೊಳೆಯುವ ಆಶಯವನ್ನು ವ್ಯಕ್ತಪಡಿಸುತ್ತಲೇ, ಅಂತರಂಗದ ಕಸವನ್ನು ಒಡೆಯನಿರಲಿ ಇಲ್ಲದಿರಲಿ ಸ್ವಚ್ಛಮಾಡಿಕೊಳ್ಳುವ ನಿಲುವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ.

ಪ್ರಸ್ತುತ ‘ಸ್ವಚ್ಛಭಾರತ್’ ಎಂಬ ಘೋಷಣೆಗಳ ಅಡಿಯಲ್ಲಿ ಸ್ಫೂರ್ತಿ ಪಡೆಯುವ ನಮಗೆ ಪೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಲೈಕು, ಕಮೆಂಟುಗಳನ್ನು ಎಣಿಸುತ್ತಾ ಆನಂದ ಪಟ್ಟರೆ ಅಲ್ಲಿಗೆ ನಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುವ ಹೊತ್ತಿನಲ್ಲಿ, ಪೌರಕಾರ್ಮಿಕರು ತಾಯಂದಿರು ಬೆಳ್ಳಂಬೆಳಗ್ಗೆ ನಿಶ್ಕಾಮ ಯೋಗಿಗಳಂತೆ ಈ ನೆಲಗುಡಿಸುವಾಗ ಅವರು ನಮ್ಮ ಮನೆ ಮುಂದೆ ಇದ್ದರೆ ‘‘ಲೇ ಕಸದವಳೆ, ಲೇ ಕಸದವನೆ’’ ಎಂದು ಸಂಭೋಧಿಸುತ್ತೇವೆ. ಪೊರಕೆಯನ್ನು ಮನೆಯ ಒಳಗೂ ಪೊರಕೆ ಹಿಡಿದವರನ್ನು ಹೊರಗೂ ನಿಲ್ಲಿಸಿ ಅದರಲ್ಲೂ ಮನುಷ್ಯರೆನ್ನುವ ಕನಿಷ್ಠ ಗೌರವವೂ ಇಲ್ಲದೆ ಯಾಂತ್ರಿಕವಾದ ಭಾಷೆಯಲ್ಲ್ಲಿ ಮಾತನಾಡಿಸುತ್ತೇವೆ ನಾವು ಭಾರತೀಯ ನಾಗರಿಕರು ಅಲ್ಲವೇ! ಕನಿಷ್ಠ ಆತ್ಮದ ಘನತೆಯನ್ನು ಕಾಪಾಡಿಕೊಳ್ಳದ ಮನುಷ್ಯರಾದ ನಾವು ಇನ್ನು ಮುಂದಾದರೂ ಕಾಯಕದ ಕುರಿತ ಆತ್ಮಗೌರವದ ಜೀವ ಸ್ಪಂದನೆ ನಮ್ಮಿಳಗೆ ಚಿಗುರಬೇಕಿದೆ. ನನಗೆ ಅನ್ನಿಸಿದ ಸಮಾಜದ ಈ ತಾರತಮ್ಯದ ನೀತಿಗಳು ಈ ಕವನ ಸಂಕಲದಲ್ಲೂ ಕೂಡ ಸಾಮಾಜಿಕ ಪರಿಸರದಲ್ಲಿನ ನೈತಿಕತೆಯ ಪ್ರಶ್ನೆಗಳಾಗಿ ಕಾವ್ಯದ ರೂಪಾಗಿ ನೀರಿನಂತೆ ನಿಂತಿವೆ, ಗಾಳಿಯಂತೆ ಹರಡಿವೆ, ಒಂದು ಮರದಂತೆ ನಿರುಮ್ಮಳವಾಗಿ ಓದಿಸಿಕೊಂಡು ಮನುಷ್ಯತ್ವವನ್ನು ತಿದ್ದುವ ಸ್ನೇಹಿತನಂತೆ ಕೆಲಸ ಮಾಡುತ್ತವೆ.

ಅಪ್ಪ ಕುಡುಕ ಅನ್ನೋದು

ಎಷ್ಟು ದಿಟವೋ ಅಷ್ಟೇ

ಪರಿಸರ ಪ್ರೇಮಿ ಕೂಡ -ಅಪ್ಪ: ಪೊರಕೆ.

ಈ ಕವಿತೆಯ ಸಾಲುಗಳು ಅಪ್ಪನ ಅಸ್ತಿತ್ವದ ಕುರಿತ ಪ್ರಶ್ನೆಗಳ ಜೊತೆಗೆ ಪರಿಸರ ಪ್ರೇಮಿಯ ಪೋಷಾಕನ್ನು ಹೊರಿಸಿ ರೂಪಕದ ಕಾವ್ಯ ಚಹರೆಯನ್ನು ಬಿಡಿಸಿಟ್ಟಿದೆ. ಇಲ್ಲಿ ಕಾವ್ಯದ ಆಂತರ್ಯವೂ ಪರಿಸರದ ಕಾಳಜಿಯ ಬೆನ್ನೇರಿ ಹೊರಡುವ ದಾವಂತದಲ್ಲಿದೆ. ಯಾಕೆ ಈ ಮಾತನ್ನು ಹೇಳಿದೆ ಎಂದರೆ ಕವಿತೆ ಮಾತನಾಡುವ ಹೊತ್ತಲ್ಲಿ ಕಾಲ ಎನ್ನುವ ಮಾಂತ್ರಿಕ ಹೊಸ ಹೊಸ ಆಟಗಳನ್ನು ಹೂಡುತ್ತಿರುತ್ತಾನೆ. ಈ ಯಂತ್ರನಾಗರೀಕತೆಯ ಬದುಕು ಮನುಷ್ಯರನ್ನು ವಸ್ತುಗಳಂತೆಯೂ ವಸ್ತುಗಳನ್ನು ಮನುಷ್ಯರಂತೆಯೂ ಕಾಣುವ ಹೊಸ ನಿಸ್ಸಾರ ಸಂವೇದನೆಯನ್ನು ನಮಗೆ ಬೆಳೆಸಿದೆ. ಇದಕ್ಕೆ ಯಾರೂ ಹೊರತಾಗಿಲ್ಲ ಎಂಬುದು ನಿರ್ವಿವಾದದ ಸಂಗತಿ. ಕವಿತೆ ಮಾತ್ರ ಸದಾ ಎಚ್ಚರದಲ್ಲಿ ಕಮಲದ ಎಲೆಯ ಮೇಲಿನ ಜಲಬಿಂದುವಿನಂತೆ ಸತ್ಯದ ತಾತ್ವಿಕ ಮಮಕಾರವನ್ನು ಸಹೃದಯನ ಎದೆಯಲ್ಲಿ ಬಿತ್ತುತ್ತಿರುತ್ತದೆ.

 ‘ದೇವರೇನು ಕೋಪಿಸಿಕೊಳ್ಳಲಾರ’ ಎಂಬ ಕವಿತೆ ಸಾಮಾನ್ಯ ವಿಷಯವನ್ನೇ ಹೆಳುತ್ತಿದ್ದರೂ ಅದರೊಳಗೆ ಅಸಾಮಾನ್ಯವಾದ ಒಂದು ತಾತ್ವಿಕತೆಯನ್ನು ಕಟ್ಟಿಕೊಡುತ್ತದೆ. ಇಲ್ಲಿ ಕವಿ ಗೆದ್ದಿದ್ದಾನೆ. ತನ್ನ ಸ್ವರೂಪದಲ್ಲಿ ಚಿತ್ರಿತವಾದ ದೇವರ ಸತ್ವವನ್ನು ಹಸಿದವರಿಗೆ ಬಡವರಿಗೆ ನೊಂದವರಿಗೆ ಸಹಾಯಮಾಡುವ ನೆಲೆಯಲ್ಲಿ ಗ್ರಹಿಸಿದ್ದಾನೆ ಕವಿ, ಇದು ಸರಿಯಾಗಿದೆ. ಆದರೆ ಭಾರತೀಯ ಆಧ್ಯಾತ್ಮಿಕ ತಳಹದಿಯನ್ನು ಶೋಧಿಸಿ ಹೊಸ ಸಾತ್ವಿಕವೂ ಸತ್ಯವೂ ಆದ ಆತ್ಮಶೋಧದ ನೆಲೆಯನ್ನು ಕಟ್ಟಿಕೊಟ್ಟ ಬುದ್ಧಗುರುವಿನ ದೈವತ್ವದ ಪರಿಕಲ್ಪನೆ, ನನಗೂ ನನ್ನ ಸಹಕವಿಮಿತ್ರರಿಗೂ ಚಿರಪರಿಚಿತವಾದಾಗ ಕೆನೆಯಾಗಿ ಉಳಿಯುವ ಸಮಾಜದ ದೃಷ್ಟಿಯಲ್ಲಿನ ದೇವರಪರಿಕಲ್ಪನೆ, ಬುದ್ಧಗುರುವಿನ ಚಿಂತನೆಗಳಿಂದ ಹೆಪ್ಪೊಡೆದು ಅಂತರಂಗದ ರತ್ನವಾಗುವ ನೆಲೆಗೆ ಏರುತ್ತದೆ.

ಎಂಬತ್ತು ಕವಿತೆಗಳ ಈ ಸಂಕಲದ ಒಳಗೆ ಒಂದು ತಾತ್ವಿಕ ಸಂಚಲನವಿದೆ. ಈ ಸಂಕಲನವನ್ನು ಕಾವ್ಯದ ಮಾದರಿಗಳ ಮಾಪಕದಲ್ಲಿ ಅಳೆಯುವುದು ಬೇಡ. ಏಕೆಂದರೆ ಕವಿ ಹೊಸ ಕಾಲದ ಹೊಸ ಆತಂಕಗಳನ್ನು ತನ್ನೊಳಗೆ ಮಾಗಿಸಿ ಕವಿತೆಯಾಗಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾನೆ. ಮೀಮಾಂಸೆಯ ಭೂತಕನ್ನಡಿಯಲ್ಲಿ ವಿಮರ್ಶೆ ಮಾಡುವ ಮೊನಚಾದ ಮಾತುಗಳು ಇಲ್ಲಿ ನೀರವತೆಯನ್ನು ಸೃಷ್ಟಿಸಬಲ್ಲವೇ ಹೊರತು ಕವಿತೆಗಳನ್ನು ಗೆಲ್ಲಿಸುವುದಿಲ್ಲ. ಕವಿತೆಗಳು ಗೆದ್ದರೆ ಕವಿ ಗೆದ್ದಂತೆಯೇ. ಕವಿ ಗೆದ್ದರೆ ಸಮಾಜದ ಕಟ್ಟಕಡೆಯವನಿಗೂ ಒಂದು ಭರವಸೆ ದೊರೆತಂತಾಗುತ್ತದೆ. ಕನ್ನಡ ಕಾವ್ಯಲೋಕದ ಸದಾ ಜೀವಾಡುವ ಕವಿತೆ ಬೇಂದ್ರೆಯವರು ‘ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ’ ಎಂದು ಹೇಳುವ ಮೂಲಕ ಕವಿಯ ಆಂತರ್ಯವು ಅರಿಯ ಬೇಕಾದ ಸತ್ಯವನ್ನು ತೆರೆದಿಟ್ಟಿದ್ದಾರೆ. ಬೇಂದ್ರೆಯವರ ಕಾವ್ಯ ಸತ್ವವು ಈ ಸಂಕಲನದ ಕವಿತೆಗಳಲ್ಲಿ ಜೀವದಂತೆ ಸೇರಬೇಕಿದೆ ಏಕೆಂದರೆ ಕವಿ ಕಾವ್ಯ ಶರೀರವನ್ನು ನಿರ್ಮಿಸಿರುವುದು ನಮಗೆ ಹೆಗ್ಗುರುತುಗಳಂತೆ ಕಾಣುತ್ತಿದೆ.

ಮನುಷ್ಯನಾಗುವುದೆಂದರೆ ಎಷ್ಟು ಕಷ್ಟ ಎನ್ನುವ ದೇವನೂರ ಮಹಾದೇವ ಅವರ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಕವಿ ಶಂಕರ್ ಅವರಿಗೆ ಶುಭಾಶಯಗಳನ್ನು ಕೋರುತ್ತೇನೆ ಜಾತಿ, ಧರ್ಮಗಳ ಸಂಕೋಲೆಯಲ್ಲಿ ಕೊಳೆತುನಾರುತ್ತಿರುವ ಸಮಾಜವನ್ನು ನಾವು ನಿಂತ ನೆಲವನ್ನು ಸ್ವಚ್ಛಮಾಡಿಕೊಳ್ಳುವ ನಿಟ್ಟಿನಲ್ಲಿ ನೀವು ಇಟ್ಟಿರುವ ಹೆಜ್ಜೆ ಅದು ಒಂದು ಮಹಾ ಪ್ರಯಾಣಕ್ಕೆ ನಾಂದಿಯಾಗಲಿ ಎಂದು ಆಶಿಸುತ್ತೇನೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News