ಕಥೆಯಾಗುವ ಬವಣೆಗಳು.....

Update: 2019-12-20 18:28 GMT

ಮುಂಬೈಯ ಕವಿ, ಕಥೆಗಾರರಾಗಿ ಗುರುತಿಸಿಕೊಂಡಿರುವ ಗೋಪಾಲ್ ತ್ರಾಸಿ, ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಬಂದವರು. ಮುಂಬೈ ಕನ್ನಡದ ಜೀವದ್ರವ್ಯವನ್ನು ಒಳಗಿಟ್ಟುಕೊಂಡು ಸಮಾಜದ ಚಟುವಟಿಕೆಗಳಲ್ಲಿ ತಮ್ಮನ್ನು ಒಂದಾಗಿಸಿಕೊಂಡವರು. ಈ ಸಂದರ್ಭದಲ್ಲಿ ಅವರು ಕಂಡುಂಡ ಅನುಭವಗಳನ್ನು, ಅವರ ದೃಷ್ಟಿಕೋನಗಳನ್ನು ಸೃಜನೇತರ ಬರಹಗಳಾಗಿಸಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವಾರ್ತಾಭಾರತಿ ದೈನಿಕದಲ್ಲೂ ಅಂಕಣಕಾರರಾಗಿದ್ದ ಗೋಪಾಲ್ ತ್ರಾಸಿ, ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಅಂಕಣ ಬರಹಗಳ ಗೊಂಚಲು ‘ಈ ಪರಿಯ ಕಥೆಯ...’ ರೂಪದಲ್ಲಿ ಹೊರ ಬಂದಿದೆ. ಮುಂಬೈಯ ವಿದ್ವಾಂಸರಾದ ಡಾ. ಜಿ. ಎನ್. ಉಪಾಧ್ಯ ಅವರು ಹೇಳುವಂತೆ ‘‘....ಮುಂಬೈ ಕನ್ನಡಿಗರ ಸಂವೇದನೆಯ ವಿಶಿಷ್ಟತೆಯನ್ನು ಗುರುತಿಸಲು, ಕನ್ನಡ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿ ಹಿಡಿಯಲು ಗೋಪಾಲ್ ಈ ಲೇಖನಗಳಲ್ಲಿ ಪ್ರಯತ್ನಿಸಿದ್ದಾರೆ. ಮುಂಬೈಯಲ್ಲಿ ಹುಟ್ಟಿ ಬೆಳೆದ ಹೊಸ ತಲೆಮಾರಿನ ತವಕ, ತಲ್ಲಣ, ಬಿಕ್ಕಟ್ಟು, ಸ್ಥಿತ್ಯಂತರ, ಗೊಂದಲಗಳ ಕಡೆಗೂ ಅವರು ಬೊಟ್ಟು ಮಾಡಿ ತೋರಿಸಿದ್ದಾರೆ. ವರ್ತಮಾನಕ್ಕೆ ಜರೂರಾಗಿ ಬೇಕಾದ ಸಹಕಾರ, ಸಹಬಾಳ್ವೆ, ಮಾನವೀಯತೆಯನ್ನು ಎತ್ತಿ ಹಿಡಿಯುವ ಹತ್ತು ಹಲವು ಚಿಂತನೀಯ ಲೇಖನಗಳು ಇಲ್ಲಿವೆ’’.

ಕೃತಿಯನ್ನು ಓದುವ ಸೊಬಗಿಗೆ ಅನುಕೂಲವಾಗುವಂತೆ ಎರಡು ಭಾಗಗಳನ್ನಾಗಿಸಿದ್ದಾರೆ. ಮೊದಲ ಭಾಗಕ್ಕೆ ‘ಚರಿತ್ರೆಯ ಬೆನ್ನು ಮತ್ತು ವರ್ತಮಾನವೂ’ ಎಂಬ ಹೆಸರನ್ನು ನೀಡಿದ್ದಾರೆ. ಮುಂಬೈಯನ್ನು ಕೇಂದ್ರವಾಗಿಟ್ಟು ಕೊಂಡು ನಡೆದ ವರ್ತಮಾನದ ಬೆಳವಣಿಗೆಗಳ ಕುರಿತ ವಿಶ್ಲೇಷಣೆಗಳು ಇಲ್ಲಿವೆ. ‘ಮಾಯಾ ಲೋಕದ ಮಹಾತ್ಮೆ’ ಎನ್ನುವ ಲೇಖನದ ಮೂಲಕ ಮುಂಬೈ ಶಹರವೆಂಬ ಆಳಕ್ಕೆ ತನ್ನ ಮೊಣಕಾಲನ್ನು ಇಳಿಸುವ ಲೇಖಕ, ಏಕಕಾಲದಲ್ಲಿ ಕವಿ ಾಗಿಯೂ ಇದರ ಮಾಯೆಗೆ ವಿಸ್ಮಿತರಾಗುತ್ತಾರೆ. ಅರವಿಂದ ನಾಡಕರ್ಣಿಯ ಕವಿತೆಯನ್ನು ಮುಂದಿಟ್ಟುಕೊಂಡು ಮುಂಬೈಯ ಅನನ್ಯತೆಯನ್ನು ಲೇಖನದಲ್ಲಿ ವಿವರಿಸುತ್ತಾರೆ. ಆನಂತರ, ಮುಂಬೈಯ ರಾಜಕೀಯ ಬೆಳವಣಿಗೆಗಳು, ಇದರೊಳಗಿನ ಮಾನವೀಯತೆ, ಮಳೆ, ಬಾರು, ಬಾಲಿಕೆಯರ ಕುರಿತಂತೆ ಬಿಡಿಬಿಡಿಯಾದ ಅಭಿಪ್ರಾಯಗಳನ್ನು ದಾಖಲಿಸುತ್ತಾ ಹೋಗುತ್ತಾರೆ. ಎರಡನೆಯ ಭಾಗಕ್ಕೆ ‘ಕನಿಕರಿಸಲು ಭೂಕಂಪದ ನೆಪ’ ಎಂದು ಹೆಸರಿಸಿದ್ದಾರೆ. ಒಳನಾಡು ಮತ್ತು ಹೊರನಾಡಿನ ಸಾಹಿತ್ಯಕ ಸಂಗತಿಗಳಿಗೆ ಈ ಅಧ್ಯಾಯವನ್ನು ಮೀಸಲಿರಿಸಿದ್ದಾರೆ. ಹಾಗೆಯೇ ಮುಂಬೈಯಲ್ಲಿ ನಡೆದ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ನೆಪವಾಗಿಟ್ಟುಕೊಂಡು ಸಾಹಿತ್ಯದ ಬೇರೆ ಬೇರೆ ಮಗ್ಗುಲನ್ನು ಮುಟ್ಟಿ ನೋಡುವ ಪ್ರಯತ್ನ ಮಾಡಿದ್ದಾರೆ. ಬದುಕು ಮತ್ತು ಭಾವ ಎರಡನ್ನು ಸಮ್ಮಿಳಿತಗೊಳಿಸಿ ಬರೆದ ಇಲ್ಲಿನ ಹೆಚ್ಚಿನ ಲೇಖನಗಳಿಗೆ ಕಥನ ಗುಣವಿದೆ. ಸ್ವತಃ ಕತೆಗಾರರೂ ಆಗಿರುವುದರಿಂದ ಗೋಪಾಲ್ ತ್ರಾಸಿಯವರಿಗೆ ಇದು ಸಾಧ್ಯವಾಗಿದೆ.

ಸುವರ್ಣಗಿರಿ ಪ್ರಕಾಶನ ಮಂಗಳೂರು ಇವರು ಹೊರತಂದಿರುವ ಈ ಕೃತಿಯ ಪುಟಗಳು 226. ಮುಖಬೆಲೆ 250 ರೂ. ಆಸಕ್ತರು 9930262088 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News