ಶೀಘ್ರದಲ್ಲಿಯೇ ಚಿನ್ನದ ಪದಕ ಪ್ರಶಸ್ತಿ ವಿತರಣೆ: ಸಚಿವ ಸಿ.ಸಿ.ಪಾಟೀಲ್

Update: 2019-12-21 18:52 GMT

ಬೆಂಗಳೂರು, ಡಿ.21: ಇದುವರೆಗೂ ವಿತರಣೆಯಾಗದ ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಸಿಬ್ಬಂದಿಗೆ ನೀಡುವ ಚಿನ್ನದ ಪದಕ ಪ್ರಶಸ್ತಿಯನ್ನು ಶೀಘ್ರದಲ್ಲಿಯೇ ವಿತರಣೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಸಿ.ಸಿ.ಪಾಲೀಟ್ ಹೇಳಿದ್ದಾರೆ.

ಶನಿವಾರ ನಗರದ ಅರಣ್ಯ ಭವನದಲ್ಲಿ ಬಿ.ಮಾರಪ್ಪ ಸ್ಮಾರಕ ಟ್ರಸ್ಟ್ ಹಾಗೂ ಅರಣ್ಯ ಇಲಾಖೆ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಅತ್ಯುತ್ತಮ ಸೇವೆ ಸಲ್ಲಿಸಿದ ಇಲಾಖೆಯ ಸಿಬ್ಬಂದಿಗೆ ಬಿ.ಮಾರಪ್ಪ ಸ್ಮಾರಕ ಟ್ರಸ್ಟ್ ಪ್ರಶಸ್ತಿ-2019 ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲರೂ ಬಹಳಷ್ಟು ಶ್ರಮ ವಹಿಸುತ್ತಾರೆ. ಅದರಲ್ಲಿಯೂ ತಳ ಮಟ್ಟದ ಸಿಬ್ಬಂದಿಯು ತಮ್ಮ ಪ್ರಾಣವನ್ನು ಲೆಕ್ಕಿಸದೇ ಅರಣ್ಯ ರಕ್ಷಣೆ ಹಾಗೂ ವನ್ಯಜೀವಿಗಳ ಉಳಿವಿಗಾಗಿ ಕೆಲಸ ಮಾಡುತ್ತಾರೆ. ಆದರೆ, ಬಹುತೇಕ ಕಡೆಗಳಲ್ಲಿ ಗೆಲುವಿನ ಶ್ರೇಯಸ್ಸು ಮೇಲಾಧಿಕಾರಿಗಳಿಗೆ ಸಲ್ಲುತ್ತದೆ. ತಳ ಮಟ್ಟದ ಅಧಿಕಾರಿಗಳು ಹಿಂದೆಯೇ ಉಳಿದುಬಿಡುತ್ತಾರೆ ಎಂದು ತಿಳಿಸಿದರು.

ರಾಜ್ಯದ ಬಂಡೀಪುರ ಅರಣ್ಯದಲ್ಲಿ ಇತ್ತೀಚಿಗೆ ಹುಲಿಯೊಂದು ಆಗಮಿಸಿತ್ತು. ಅದನ್ನು ಹಿಡಿಯುವಲ್ಲಿ ತಳಮಟ್ಟದ ಸಿಬ್ಬಂದಿ ಪ್ರಾಣದ ಹಂಗನ್ನು ತೊರೆದು ಶ್ರಮಿಸಿದರು. ನಾನು ಹುಲಿಯನ್ನು ಸೆರೆ ಹಿಡಿದ ಬಳಿಕ ಅಲ್ಲಿಗೆ ಹೋಗಿದ್ದೆ. ಆದರೆ, ಮಾರನೆಯ ದಿನದಂದು ದಿನಪತ್ರಿಕೆಗಳಲ್ಲಿ ಸಚಿವರ ಮಾರ್ಗದರ್ಶನ, ಕಾಳಜಿ ವಹಿಸಿದ್ದರಿಂದ ಹಿಡಿದರು ಎಂದು ಬರೆದಿದ್ದರು ಎಂದರು.

ಇಲಾಖೆ ವ್ಯಾಪ್ತಿಯಲ್ಲಿ ಕೆಳಮಟ್ಟದಲ್ಲಿ ದುಡಿಯುವ ಸಿಬ್ಬಂದಿಗೆ ಸಿಗಬೇಕಾದ ಗೌರವ ಹಾಗೂ ಸನ್ಮಾನಗಳು ಸಲ್ಲಬೇಕು. ಆ ಮೂಲಕ ಅವರನ್ನು ಉತ್ತೇಜಿಸುವ ಮೂಲಕ, ಹೆಚ್ಚಿನ ಸೇವೆ ಮಾಡಲು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಹಿಂದುಳಿದುಕೊಂಡಿರುವ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿಗಳನ್ನು ಅರ್ಹರನ್ನು ಆಯ್ಕೆ ಮಾಡಿ ಶೀಘ್ರದಲ್ಲಿಯೇ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪರಿಸರ, ಅರಣ್ಯ, ಕಾಡನ್ನು ಉಳಿಸಿಕೊಳ್ಳಬೇಕಿದೆ. ಆ ಮೂಲಕ ಮಂದಿನ ಪೀಳಿಗೆಗೆ ನಾವು ಏನು ನೀಡುತ್ತೇವೆ ಎಂಬುದು ಮುಖ್ಯ. ಹೀಗಾಗಿ, ಅರಣ್ಯವನ್ನು ಉಳಿಸಿಕೊಳ್ಳಲು ಅಧಿಕಾರಿ, ಸಿಬ್ಬಂದಿ ಜತೆಗೆ ಕೈಜೋಡಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಅರಣ್ಯ ಪಡೆಯ ಮುಖ್ಯಸ್ಥ ಪೊನ್ನಟ್ಟಿ ಶ್ರೀಧರ್ ಮಾತನಾಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವಹಿಸಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಬೆಲೆಬಾಳುವ ಅರಣ್ಯ ಸಂಪತ್ತನ್ನು ಉಳಿಸುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಾರೆ. ಅವರಿಗೆ ಇಂತಹ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅವರನ್ನು ನೋಡಿ ಮತ್ತಷ್ಟು ಜನರು ಸ್ಪೂರ್ತಿ ಪಡೆಯುತ್ತಾರೆ ಎಂದರು.

ಈ ಬಾರಿಯ ಬಿ.ಮಾರಪ್ಪ ಪ್ರಶಸ್ತಿಯನ್ನು ಜಿ.ಸಂತೋಷ್, ಹಜರತ್ ಸಾಬ ಗೌಸಖಾನ ಕುಂದಗೋಳ, ಎಸ್.ಜೆ.ನವೀನ್‌ಕುಮಾರ್, ಪಿ.ಟಿ.ಶಶಿ, ಚರಣಕುಮಾರ್, ಸೋಮಶೇಖರ ಬಿ.ಪಾವಟೆ, ಷಣ್ಮುಖ ಯು, ಎಚ್.ಎ.ನಯನ ಕುಮಾರಿ, ಮಹದೇವ ಎಂ.ಮಡ್ಡಿ, ಎಂ.ಡಿ.ಅಯ್ಯಪ್ಪ, ಶರತ್ ಶೆಟ್ಟಿ, ಚೌಡಪ್ಪನಾಯ್ಕ ವಿ.ಜಿಡ್ಡಿಮನಿ, ಅಬ್ದುಲ್ ಮುಜೀಬ್, ಪಾಪಣ್ಣ ಸಣ್ಣಬೋರಯ್ಯ, ಸಂಜೀವಿ ಮಾರುತಿ ಅಸ್ನೋಟಿಕರ್ ಹಾಗೂ ಜಟ್ಟಿ ತಿಮ್ಮಯ್ಯ ನಾಯ್ಕರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಮುಖ್ಯಕಾರ್ಯದರ್ಶಿ ಸಂದೀಪ್ ದಳವಾಯಿ, ಅಜಯ್ ಮಿಶ್ರಾ, ಟ್ರಸ್ಟ್ ಅಧ್ಯಕ್ಷ ಆರ್.ಎಂ.ಪಾಲಣ್ಣ, ಟ್ರಸ್ಟಿ ಎನ್.ಸಂಪಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂದಿನ ತಿಂಗಳಿನಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಬೇಸಿಗೆ ಕಾಲದಲ್ಲಿ ಸೃಷ್ಟಿಯಾಗುವ ಬೆಂಕಿ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲಾಗುವುದು. ಸಿಎಸ್‌ಎಫ್ ಹಣ ಬಳಸಿಕೊಂಡು ಅರಣ್ಯದ ಅಂಚಿನಲ್ಲಿರುವ ಗ್ರಾಮಗಳ ಜನರ ನೆರವಿಗೆ ಸಹಕಾರ ನೀಡಲಾಗುವುದು.
-ಸಿ.ಸಿ.ಪಾಟೀಲ್, ಅರಣ್ಯ ಇಲಾಖೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News