ಪರಿಶಿಷ್ಟ ಜಾತಿ ಮೀಸಲಾತಿ ಶೇ.15ರಿಂದ 20ರಷ್ಟು ಹೆಚ್ಚಳಕ್ಕೆ ಎಚ್.ಆಂಜನೇಯ ಆಗ್ರಹ

Update: 2019-12-21 18:58 GMT

ಬೆಂಗಳೂರು, ಡಿ. 21: ರಾಜ್ಯದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲಾತಿಯನ್ನು ಶೇ.15ರಿಂದ 20ಕ್ಕೆ ಹೆಚ್ಚಳ ಮಾಡಬೇಕೆಂದು ಕೋರಿ ಡಿ.23ಕ್ಕೆ ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಆಂಜನೇಯ, ಸ್ವಾತಂತ್ರ ಬಂದಾಗಿನಿಂದಲೂ ಈವರೆಗೂ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ಇದೆ. ಆದರೆ, ಎಸ್ಸಿ-ಎಸ್ಟಿ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಎಸ್ಸಿಗೆ ಶೇ.15ರಿಂದ ಶೇ.17ರಷ್ಟು ಮೀಸಲಾತಿ ಹೆಚ್ಚಳಕ್ಕೆ ಸರಕಾರ ಉದ್ದೇಶಿಸಿರುವುದು ಅವೈಜ್ಞಾನಿಕ. ಎಸ್ಸಿಗೆ ಕನಿಷ್ಟ ಶೇ.20ರಷ್ಟು ಮೀಸಲಾತಿ ಏರಿಕೆ ಮಾಡಬೇಕೆಂದು ಆಗ್ರಹಿಸಿದರು.

ಖಾಸಗಿ ವಲಯದ ಶಿಕ್ಷಣ-ಉದ್ಯೋಗಗಳಿಗೂ ಇದೇ ಮೀಸಲಾತಿ ವಿಸ್ತರಿಸಬೇಕು. ಅಲ್ಲದೆ, ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಮೀಸಲಾತಿ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಂಜನೇಯ ಒತ್ತಾಯಿಸಿದರು.
ಡಿ.23ರ ಬೆಳಗ್ಗೆ 11ಗಂಟೆಗೆ ನಗರದ ಯವನಿಕಾ ಸಭಾಂಗಣದಲ್ಲಿ ಎಲ್ಲ ಜಿಲ್ಲೆಗಳ ದಲಿತ ಸಮುದಾಯದ ಪ್ರತಿನಿಧಿಗಳು ಸಮಾವೇಶಗೊಳ್ಳಲಿದ್ದು, ನ್ಯಾ.ನಾಗಮೋಹನ ದಾಸ್ ನೇತೃತ್ವದ ಆಯೋಗಕ್ಕೆ ಪರಿಶಿಷ್ಟ ಜಾತಿಯ ಜನಸಂಖ್ಯೆ, ಮೀಸಲಾತಿ ಹೆಚ್ಚಳದ ಅನಿವಾರ್ಯತೆಯ ಬಗ್ಗೆ ವಿಸ್ತೃತ ವರದಿ ಸಲ್ಲಿಸಲಾಗುವುದು ಎಂದರು.

‘ಜಾತಿ ಅಪಮಾನ, ಸಾಮಾಜಿಕ ಶೋಷಣೆ, ಅವಕಾಶ ವಂಚಿತರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕೇಂದ್ರ ಸರಕಾರ ಮೇಲ್ಜಾತಿ ಬಡವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವುದು ಸಲ್ಲ ಎಂದ ದಸಂಸ ಮುಖಂಡ ಮಾವಳ್ಳಿ ಶಂಕರ್, ಪರಿಶಿಷ್ಟ ಜಾತಿಗೆ ಶೇ.20ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ಅಮರೇಶ್ ಮತ್ತು ಕುಮಾರ್ ಹಾಜರಿದ್ದರು.

‘ಇಪ್ಪತ್ತೈದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಬದಲು ಕೇಂದ್ರದ ಮೋದಿ ಸರಕಾರ ಗುತ್ತಿಗೆ ನೌಕರರ ನೇಮಕದ ಮೂಲಕ ಆಧುನಿಕ ಜೀತ ಪದ್ಧತಿ ಜಾರಿಗೆ ತಂದಿದ್ದು, ಇದನ್ನು ಕೂಡಲೇ ರದ್ದುಪಡಿಸಬೇಕು. ಖಾಸಗಿ ಕ್ಷೇತ್ರದಲ್ಲಿಯೂ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಬೇಕು’
-ಎಚ್.ಆಂಜನೇಯ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News