ಮಂಗಳೂರು ಗಲಭೆ ಪ್ರಕರಣದಲ್ಲಿ ರಾಜ್ಯ ಸರಕಾರದಿಂದಲೇ ರಾಜಕೀಯ: ಎಚ್.ಕೆ.ಪಾಟೀಲ್

Update: 2019-12-25 14:04 GMT

ಹುಬ್ಬಳ್ಳಿ, ಡಿ.25: ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯುವಾಗ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಪ್ರಕರಣದ ಕುರಿತು ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮಾಜಿ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ವಿಚಾರದಲ್ಲಿ ರಾಜ್ಯ ಸರಕಾರವೇ ರಾಜಕೀಯ ಮಾಡುತ್ತಿದೆ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಿರುವಾಗ ಗಲಭೆಗಳ ಕುರಿತು ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು ಎಂಬ ಉದ್ದೇಶ ಸರಕಾರಕ್ಕಿಲ್ಲ. ಎನ್‌ಆರ್‌ಸಿ ಹಾಗೂ ಸಿಎಎ ರಾಷ್ಟ್ರೀಯ ವಿಚಾರಗಳಾಗಿದ್ದು, ಯಾವುದೋ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ಆದುದರಿಂದ, ಈ ಬಗ್ಗೆ ಸರ್ವಪಕ್ಷಗಳ ಸಭೆ ಕರೆದು ಮತ್ತೊಮ್ಮೆ ಚರ್ಚಿಸಿ, ಸರ್ವಸಮ್ಮತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಆದರೆ, ಬಿಜೆಪಿ ಸಿಎಎ ಹಾಗೂ ಎನ್‌ಆರ್‌ಸಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಇಂತಹ ಕೆಟ್ಟ ಬೆಳವಣಿಗೆಗಳು ನಡೆಯಬಾರದು. ಪ್ರಧಾನಿ ನರೇಂದ್ರಮೋದಿ ಸರಕಾರ ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ತರಲು ಹೊರಟಿದೆ ಎಂದು ಎಚ್.ಕೆ.ಪಾಟೀಲ್ ದೂರಿದರು.

ಈಶಾನ್ಯ ರಾಜ್ಯಗಳಲ್ಲಿ ಈಗಾಗಲೇ ಪ್ರತಿಭಟನೆಗಳು ತೀವ್ರಗೊಂಡಿವೆ. ತ್ರಿಪುರಾದಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಅನೇಕ ಬೃಹತ್ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News