ಮೋದಿ ಬಳಿ ಬಕೆಟ್ ಹಿಡಿದು ತೇಜಸ್ವಿ ಸೂರ್ಯ ಸಂಸದರಾಗಿದ್ದಾರೆ: ಡಾ.ಪುಷ್ಪಾ ಅಮರನಾಥ್

Update: 2019-12-25 18:14 GMT

ಮೈಸೂರು,ಡಿ.25: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಪೊಲೀಸರನ್ನೇ ತನಿಖೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಒತ್ತಾಯಿಸಿದರು.

ಮಂಗಳೂರಿನಲ್ಲಿ ಪೊಲೀಸರು ಏಕಾಏಕಿ ಗೋಲಿಬಾರ್ ಮಾಡಿದ್ದಾರೆ. ಗೋಲಿಬಾರ್ ಮಾಡುವ ಮುನ್ನ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕಿತ್ತು. ಆದರೆ ಮಂಗಳೂರು ಪೊಲೀಸರು ಅದ್ಯಾವುದನ್ನೂ ವಹಿಸಿಲ್ಲ. ಗೋಲಿಬಾರ್ ಗೂ ಮುನ್ನಾ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು, ಜೊತೆಗೆ ಮೈಕ್‍ನಲ್ಲಿ ಅನೌನ್ಸ್ ಮಾಡಬೇಕು, ನಂತರ ಟಿಯರ್ ಗ್ಯಾಸ್ ಪ್ರಯೋಗಿಸಬೇಕು ಇದಕ್ಕೂ ಬಗ್ಗಲಿಲ್ಲ ಎಂದರೆ ಕಾಲಿಗೆ ಗುಂಡು ಹೊಡೆಯಬೇಕು, ಇವರು ಯಾವ ಕ್ರಮವನ್ನು ವಹಿಸದೇ ಏಕಾಏಕಿ ಉದ್ದೇಶಪೂರ್ವಕವಾಗಿ ಗೋಲಿಬಾರ್ ಮಾಡಿ ಸಾಯಿಸಿದ್ದಾರೆ. ಮೊದಲು ಪೊಲೀಸರ ವಿರುದ್ಧ ತನಿಖೆಯಾಗಬೇಕು ಎಂದು ಹೇಳಿದರು.

ಆಟೋಗಳಲ್ಲಿ ಕಾಂಗ್ರೆಸ್‍ನವರು ಮೂಟೆ ಮೂಟೆಗಳಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದಾರೆ ಎಂದು ಕೆಲವು ದೃಶ್ಯಮಾಧ್ಯಮಗಳು ತೋರಿಸುತ್ತಿದ್ದವು. ತನಿಖೆ ಹಂತದಲ್ಲಿ ಇರಬೇಕಾದರೆ ಹೇಗೆ ಕಾಂಗ್ರೆಸ್ ನವರು ಎಂದು ದೃಶ್ಯಮಾಧ್ಯಮಗಳು ಹೇಳುತ್ತವೆ? ಮೊದಲು ತನಿಖೆ ಮಾಡಲಿ ನಂತರ ಅವರು ಕಾಂಗ್ರೆಸ್ ನವರೊ ಬಿಜೆಪಿಯವರೊ ಗೊತ್ತಾಗಲಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮಾತಿಗಿಂತ ಅಲ್ಲಿನ ಸಂಘಪರಿವಾರ ಆರೆಸ್ಸೆಸ್ ನಾಯಕರ ಮಾತುಗಳನ್ನೇ ಪೊಲೀಸರು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಹೆಸರಿಗೆ ಕಪ್ಪು ಚುಕ್ಕೆ ತರಲು ಆರೆಸ್ಸೆಸ್ ನವರೇ ಏಕೆ ಗಲಾಟೆ ಮಾಡಿಸಿರಬಾರದು? ಒಟ್ಟಿನಲ್ಲಿ ಈ ಪ್ರಕರಣವನ್ನು ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಮೋದಿಯವರ ಬಳಿ ಗೋಗರೆದು ಬಕೆಟ್ ಹಿಡಿದು ಸಂಸದರಾದ ತೇಜಸ್ವಿ ಸೂರ್ಯ ಅವರ ಹೇಳಿಕೆ ಅವರ ನೀಚ ಬುದ್ದಿಯನ್ನು ತೋರಿಸುತ್ತದೆ ಹಿಂಬಾಗಿಲಿನ ಮೂಲಕ ಸಂವಿಧಾನವನ್ನು ಬದಲಿಸುವ ಯತ್ನವನ್ನು ಪ್ರಧಾನಿ ಮೋದಿ ಅಮಿತ್ ಶಾ ಮಾಡುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ ಸಂವಿಧಾನ ಬದಲಾಯಿಸಿ.

-ಡಾ.ಪುಷ್ಪಾ ಅಮರನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News