ಸ್ಪರ್ಧೆ ಅನಿವಾರ್ಯವೇ?

Update: 2019-12-25 18:31 GMT

ನಾವಿಂದು ಎಲ್ಲ ರಂಗಗಳಲ್ಲೂ ಸ್ಪರ್ಧೆಯನ್ನೆದುರಿಸಲೇ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಬ್ಬರ ಏಳ್ಗೆಯನ್ನು ಸಹಿಸದೆ ‘ಓವರ್‌ಟೇಕ್’ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಸ್ಪರ್ಧಿಸಿ ಗೆಲ್ಲಲು ಅಡ್ಡದಾರಿಗಳನ್ನು ಹಿಡಿಯಲು ಹಿಂಜರಿಯುವುದಿಲ್ಲ. ಇದರ ನೇರ ಬಲಿಪಶುಗಳು ವಿದ್ಯಾರ್ಥಿಗಳು ಮತ್ತು ಮಕ್ಕಳು. ಇದು ಅವರ ಬಾಲ್ಯವನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ಈ ಸ್ಪರ್ಧೆಯ ಒತ್ತಡಕ್ಕೆ ಸಿಲುಕಿದ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ಮಾನಸಿಕ ರೋಗಿಗಳಾಗಿ ಬದಲಾಗಿದ್ದಾರೆ. ಸ್ಪರ್ಧೆ ತನ್ನ ಸಹಪಾಠಿಯನ್ನು ದ್ವೇಷಿಸುವುದನ್ನು ಕಲಿಸುತ್ತದೆ. ಬಾಲ್ಯದ ಮುಗ್ಧತೆ ಕಲುಷಿತಗೊಳ್ಳುತ್ತದೆ. ಎದುರಾಳಿಯನ್ನು ತುಳಿಯುವುದಕ್ಕೆ ಇದು ಕಲಿಸುತ್ತದೆ. ರಾಜಕೀಯ, ಶಿಕ್ಷಣ, ಸಾಹಿತ್ಯ, ಕ್ರೀಡೆ ಎಲ್ಲ ಕಡೆಯೂ ಕಣ್ಣಿಗೆ ರಾಚುವಂತೆ ಇರುವ, ಸ್ನೇಹ ಸಂಬಂಧವನ್ನು ಹಾಳುಗೆಡಹುವ ಇಂತಹ ಸ್ಪರ್ಧೆಗಳು ಬೇಕೇ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಡಾ. ಮಹಾಬಲೇಶ್ವರ ರಾವ್ ಅವರ ‘ಸ್ಪರ್ಧೆಯೋ? ಸಹಕಾರವೋ?’ ಕೃತಿ ಚರ್ಚಿಸುತ್ತದೆ. ಸ್ಪರ್ಧಾತ್ಮಕತೆಯ ಮನೋವೈಜ್ಞಾನಿಕ ಅಂತರಂಗದೊಳಗೆ ಈ ಕೃತಿ ಪ್ರವೇಶಿಸುತ್ತದೆ.

 ಶಿಕ್ಷಣ ರಂಗದಲ್ಲಿ ಸ್ಪರ್ಧೆ, ಸ್ಪರ್ಧಾತ್ಮಕತೆ ಇರಲೇಬಾರದು ಎಂದು ಈ ಕೃತಿ ಹೇಳುತ್ತದೆ. ಬದಲಿಗೆ ಸಹಕಾರ ಮತ್ತು ಸಹಯೋಗದ ಭಾವವನ್ನು ಅಪೇಕ್ಷಿಸುತ್ತದೆ. ಇದರ ಮೊದಲ ಭಾಗ ಸ್ಪರ್ಧೆ ಹಾಗೂ ಸ್ಪರ್ಧಾತ್ಮಕತೆ ಬಗೆಗಿನ ಮನಃಶಾಸ್ತ್ರೀಯ ವಿಚಾರಗಳನ್ನು ಕಟ್ಟಿಕೊಟ್ಟಿದೆ. ಎರಡನೆಯ ಭಾಗವು ಶಿಕ್ಷಣ ರಂಗದಲ್ಲಿನ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿದ ಕೆಲವು ಲೇಖನಗಳನ್ನು ಒಳಗೊಂಡಿದೆ. ಮೊದಲ ಭಾಗದಲ್ಲಿ ಸ್ಪರ್ಧೆ ಅನಿವಾರ್ಯವೇ?, ಸ್ಪರ್ಧೆಯಿಂದ ಯಾರಿಗೇನು ಲಾಭ?, ಸ್ಪರ್ಧೆ ಏತಕ್ಕಾಗಿ?, ಹೇಗಾದರೂ ಮಾಡಿ ಗೆಲ್ಲಬೇಕೇ?, ಸ್ಪರ್ಧೆಗಳನ್ನು ಮೀರಿ ಗೆಲ್ಲುವುದು ಹೇಗೆ?, ಸ್ಪರ್ಧೆಯೋ ಸಹಕಾರವೋ? ಮೊದಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತದೆ. ಎರಡನೇ ಭಾಗದಲ್ಲಿ ಮನಸ್ಸಿನ ವಿಕಾಸಕ್ಕೆ ಪೂರಕವಾದ ಲೇಖನಗಳಿವೆ. ಸ್ಪರ್ಧೆಯ ಬಗ್ಗೆ ಚೋಮ್‌ಸ್ಕಿ ನಿಲುವುಗಳನ್ನು ಹಂಚಿಕೊಳ್ಳಲಾಗಿದೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಅಪಾಯಗಳನ್ನು ಬೊಟ್ಟು ಮಾಡಲಾಗಿದೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 72. ಮುಖಬೆಲೆ 80 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News