ಕಡಿಮೆ ಶಾಸಕರಿಂದ ಸರಕಾರ ರಚಿಸುವುದನ್ನು ಶರದ್ ಪವಾರ್ ನಮಗೆ ಕಲಿಸಿದ್ದಾರೆ: ಉದ್ಧವ್ ಠಾಕ್ರೆ

Update: 2019-12-25 18:43 GMT

ಪುಣೆ, ಡಿ. 25: ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಿಜೆಪಿ ಏಕೈಕೆ ಅತಿ ದೊಡ್ಡ ಪಕ್ಷ ಎಂಬ ಹೇಳಿಕೆ ಕುರಿತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

 ‘‘ಬೆಳೆ ಉತ್ಪಾದನೆ ಹೇಗೆ ಹೆಚ್ಚಿಸಬೇಕು ಹಾಗೂ ವಿಧಾನಸಭೆಯಲ್ಲಿ ಕಡಿಮೆ ಸಂಖ್ಯೆಯ ಸದಸ್ಯರಿಂದ ಸರಕಾರವನ್ನು ಹೇಗೆ ರೂಪಿಸಬೇಕು ಎಂಬ ಬಗ್ಗೆ ಶರದ್ ಪವಾರ್ ಅವರು ನಮಗೆ ಕಲಿಸಿದ್ದಾರೆ’’ ಎಂದು ಶಿವಸೇನೆಯ ಅಧ್ಯಕ್ಷರೂ ಆಗಿರುವ ಠಾಕ್ರೆ ಹೇಳಿದ್ದ್ಜಾರೆ.

ಇಲ್ಲಿನ ವಸಂತದಾದಾ ಶುಗರ್ ಇನ್‌ಸ್ಟಿಟ್ಯೂಟ್‌ನಲ್ಲಿ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕ್ಟೋಬರ್ 21ರಂದು ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆದರೆ, ಶಿವಸೇನೆ ಮೈತ್ರಿಯಿಂದ ಹೊರಬಂದು ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಕೈಜೋಡಿಸಿತ್ತು. ಅನಂತರ ಮೂರು ಪಕ್ಷಗಳು ಮಹಾ ವಿಕಾಸ ಅಘಾಡಿ ರೂಪಿಸಿ ನವೆಂಬರ್ ಅಂತ್ಯದಲ್ಲಿ ಸರಕಾರ ರಚಿಸಿತ್ತು.

ಮಹಾರಾಷ್ಟ್ರದ ಚರಿತ್ರೆಯಲ್ಲಿ ರಾಜ್ಯ ಮಟ್ಟದಲ್ಲಿ ಇಂತಹ ಮೊದಲ ರಾಜಕೀಯ ವ್ಯವಸ್ಥೆ ಆಡಳಿತಾರೂಢ ಮೈತ್ರಿಯ ರೂವಾರಿ ಪವಾರ್ ಎಂದು ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ ಕೃಷಿ ಸಾಲವನ್ನು ಸಂಪೂರ್ಣವಾಗಿ ಹಿಂದೆಗೆಯಲಾಗುವುದು ಎಂದು ಠಾಕ್ರೆ ಭರವಸೆ ನೀಡಿದ್ದಾರೆ. ‘‘ಕೃಷಿಕರಿಗೆ ತುರ್ತು ಪರಿಹಾರವಾಗಿ 2 ಲಕ್ಷ ರೂ. (ಪ್ರತಿ ಕೃಷಿಕ) ಕೃಷಿ ಸಾಲ ಮನ್ನಾ ಮಾಡಲಾಗುವುದು. ಆದರೆ, ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡುತ್ತೇವೆ’’ ಎಂದು ಠಾಕ್ರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News