ಮಂಗಳನೆಡೆಗೆ ಯಾನಕ್ಕೆ ‘ನಾಸಾ’ದ ಸಿದ್ಧತೆ ಸ್ವಚ್ಛತೆಗೆ ಆದ್ಯತೆ

Update: 2019-12-28 16:37 GMT

ವಾಷಿಂಗ್ಟನ್, ಡಿ.28: ಮುಂದಿನ ವರ್ಷ ಮಂಗಳಗ್ರಹದೆಡೆಗೆ ಯಾನ ನಡೆಸಲಿರುವ ಮಾರ್ಸ್ 2020 ರೋವರ್ ಕುಜಗ್ರಹದಲ್ಲಿ ಸೂಕ್ಷ್ಮಜೀವಿಯ ಬದುಕಿನ ಕುರುಹುಗಳನ್ನು ಅನ್ವೇಷಿಸುವುದರ ಜೊತೆಗೆ ಭವಿಷ್ಯದಲ್ಲಿ ನಡೆಯುವ ಮಂಗಳಯಾನಗಳಿಗೆ ಮಾರ್ಗಸೂಚಿಯಾಗಿರಲಿದೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.

 ಶುಕ್ರವಾರ ನಾಸಾದ ಕಚೇರಿಯಲ್ಲಿ ಮಾರ್ಸ್ 2020 ರೋವರ್ ಅನ್ನು ಅನಾವರಣಗೊಳಿಸಲಾಯಿತು. ಸಾಮಾನ್ಯ ಕಾರಿನ ಗಾತ್ರದಲ್ಲಿರುವ ಮಾರ್ಸ್ 2020 ರೋವರ್ ಆರು ಚಕ್ರಗಳನ್ನು ಹೊಂದಿದೆ. ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಅತ್ಯಂತ ಶುದ್ಧವಾದ ಪ್ರಯೋಗಶಾಲೆಯನ್ನು ಮಂಗಳಯಾನದ ಸಿದ್ಧತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಂಗಳನನ್ನು ತಲುಪುವವರೆಗೆ ಯಂತ್ರಾಂಶಗಳನ್ನು ಸಾಧ್ಯವಿದ್ದಷ್ಟು ಸ್ವಚ್ಛ ಮತ್ತು ಸುರಕ್ಷಿತವಾಗಿಡಬೇಕಿದೆ ಎಂದು ಮಾರ್ಸ್ 2020ರ ಕಾರ್ಯಾಚರಣೆ ವ್ಯವಸ್ಥಾಪಕ ಡೇವಿಡ್ ಗ್ರುಯೆಲ್ ಹೇಳಿದ್ದಾರೆ.

ಬಿಲಿಯಾಂತರ ವರ್ಷಗಳ ಹಿಂದೆ ಜೀವಿಸಿದ್ದವು ಎಂದು ಹೇಳಲಾಗಿರುವ ಸೂಕ್ಷ್ಮಾಣು ಜೀವಿಗಳ ಕುರುಹನ್ನು ಅನ್ವೇಷಿಸುವ ಹಿನ್ನೆಲೆಯಲ್ಲಿ ಮಂಗಳ ಗ್ರಹದಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ತರುವ ಉದ್ದೇಶದ ಯೋಜನೆ ಇದಾಗಿದೆ. ಶುಕ್ರವಾರ ಮಾಧ್ಯಮದವರಿಗೆ ಪ್ರಯೋಗಶಾಲೆಗೆ ಪ್ರವೇಶ ಕಲ್ಪಿಸಲಾಗಿದೆ. ಮಾಧ್ಯಮದವರನ್ನು ಕೋಣೆಯೊಳಗೆ ಪ್ರವೇಶಿಸುವ ಮೊದಲು ಸುದೀರ್ಘ ಕ್ರಿಮಿನಾಶಕ ಪ್ರಕ್ರಿಯೆಗೆ ಒಳಡಿಸಲಾಗಿದೆ. ಪ್ರಯೋಗಾಲದ ಹೊರಕೋಣೆಗೆ ಪ್ರವೇಶಿಸುವ ಮೊದಲೇ ಪತ್ರಕರ್ತರ ಶೂಗಳನ್ನು ಸ್ವಯಂಚಾಲಿತ ಯಂತ್ರಗಳಿಂದ ಶುದ್ಧಗೊಳಿಸಲಾಗಿದೆ.

ಬಳಿಕ ‘ಕ್ರಿಮಿನಾಶಕ ನಿಲುವಂಗಿ’ಯನ್ನು ಮತ್ತು ಮುಖಕ್ಕೆ ಮಾಸ್ಕ್ , ಕೈಗಳಿಗೆ ಗ್ಲೌಸ್ (ಕೈಗವಸು) ಧರಿಸುವಂತೆ ಸೂಚಿಸಲಾಗಿದೆ. ಅಂತಿಮವಾಗಿ ಪ್ರಯೋಗಾಲಯ ಪ್ರವೇಶಿಸುವ ಮೊದಲು ಏರ್ ಶವರ್‌ನಡಿ ಸಾಗುವ ಮೂಲಕ ಮೈಮೇಲೆ ಇರಬಹುದಾದ ಅನಗತ್ಯದ ವಸ್ತುಗಳನ್ನು ದೂರಗೊಳಿಸಲಾಗಿದೆ. ಪತ್ರಕರ್ತರ ಮೊಬೈಲ್‌ನ ಕವರನ್ನು ತೆಗೆಯುವಂತೆ ಸೂಚಿಸಲಾಗಿದೆ(ಮೊಬೈಲ್ ಕವರ್‌ನಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಉತ್ಪತ್ತಿಯಾಗುತ್ತವೆ). ಬಳಿಕ ಪತ್ರಕರ್ತರ ಬಳಿಯಿದ್ದ ಪೆನ್ ಹಾಗೂ ಇತರ ಸಾಧನಗಳ ಬದಲು ವಿಶೇಷ ಪೆನ್ ಹಾಗೂ ಪೇಪರ್‌ಗಳನ್ನು ಒದಗಿಸಲಾಗಿದೆ. ಜೊತೆಗೆ, ಯಾವುದೇ ರೀತಿಯ ಪ್ರಸಾಧನ ಬಳಸದಂತೆ ಮತ್ತು ವಿಶೇಷ ಮೇಕಪ್ ಮಾಡಿಕೊಳ್ಳದಂತೆ(ಕೂದಲಿಗೆ ಡೈ ಹಾಕುವುದು, ಬಣ್ಣ ಹಾಕುವುದು ಇತ್ಯಾದಿ) ಅತಿಥಿಗಳಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News