"ಪೌರತ್ವ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಗೆ ಮುಂದಾದರೆ ಪ್ರತಿಭಟನಾಗಾರರ ಆಸ್ತಿ ಮುಟ್ಟುಗೋಲು"

Update: 2019-12-28 18:38 GMT

ಹಾಸನ: ಪೌರತ್ವ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಗೆ ಮುಂದಾದರೆ ಪ್ರತಿಭಟನಾಗಾರರ ಆಸ್ತಿ-ಪಾಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಾಧುಸ್ವಾಮಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದ್ದರಿಂದ ಅಲ್ಲಿನ ಸರಕಾರ ಹಾನಿಗೆ ಕಾರಣರಾದವರ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಆ ಮಾಧರಿಯಲ್ಲಿ ನಮ್ಮ ರಾಜ್ಯದಲ್ಲೂ ಸಿಎಎ, ಎನ್.ಆರ್.ಸಿ ಹೆಸರಿನಲ್ಲಿ ಪ್ರತಿಭಟನಾಕಾರರು ಆಸ್ತಿ ಪಾಸ್ತಿ ಹಾನಿಗೆ ಮುಂದಾದರೆ ಸರಕಾರ ಕಾನೂನಾತ್ಮಕವಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಕ್ರಮಕೈಗೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು.

ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮೃತರಿಗೆ ಪರಿಹಾರ ಕೊಡುತ್ತೇನೆ ಎಂದು ಘೋಷಣೆ ಮಾಡಿರಲಿಲ್ಲ. ವಾಪಾಸ್ ತೆಗೆದುಕೊಳ್ಳುವುದು ಎಲ್ಲಿಂದ ಬಂತು. ಒಂದೆಡೆ ಪ್ರಕರಣ ದಾಖಲಿಸಿ ಪರಿಹಾರ ಘೋಷಣೆ ಮಾಡುವುದು ಸರಿಯಲ್ಲ. ಮೃತರು ಗಲಭೆಯಲ್ಲಿ ಪಾಲ್ಗೊಂಡಿದ್ದಾರೋ ಇಲ್ಲವೋ ಎಂಬುದರ ಕುರಿತು ಸಿಸಿಟಿವಿ ರೆಕಾರ್ಡ್ ಪರಿಶೀಲನೆ ನಡೆಸಲಾಗುತ್ತಿದೆ ನಂತರ ಸರಕಾರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಮಾದರಿ ಕೃಷಿಕರಿಗೆ ಹಮ್ಮಿಕೊಂಡಿರುವ ಕಿಸಾನ್ ಸನ್ಮಾನ ಕಾರ್ಯಕ್ರಮದ ನಿಮಿತ್ತ ಜನವರಿ 2 ರಂದು ಸಂಜೆ 4 ಗಂಟೆಗೆ ತುಮಕೂರಿಗೆ ಆಗಮಿಸಲಿದ್ದಾರೆ. ದೇಶ ಎಲ್ಲಾ ರಾಜ್ಯದಲ್ಲೂ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರಧಾನಿ ರವರು ಈ ಬಾರಿ ಕರ್ನಾಟಕದಲ್ಲಿ ಹಮ್ಮಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಕೃಷಿಕರು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News